ಹಾಸನ : ಕರ್ನಾಟಕದ ಪ್ರತಿ ಮನೆ ಮನೆಯಲ್ಲೂ ಮುಂಜಾನೆ ಬಿಸಿ ಬಿಸಿ ಕಾಫಿ-ಟೀ ಮತ್ತು ಮಕ್ಕಳಿಗೆ ಹಾಲನ್ನ ನೀಡಲು ಹೆಸರುವಾಸಿ ಬ್ರಾಂಡ್ ಆಗಿರುವುದೇ ನಂದಿನಿ ಉತ್ಪನ್ನ. ಪ್ರತಿಯೊಬ್ಬರ ಜೀವನೋತ್ಸಾಹ ತುಂಬುವಂತಹ ನಂದಿನಿ ಉತ್ಪನ್ನ ಜನ ಜೀವನದ ಪ್ರಮುಖ ಅಂಗವಾಗಿದೆ.
ಹಾಸನದಲ್ಲಿ ಕಳೆದ ಹತ್ತು ವರ್ಷಗಳ ಇತ್ತೀಚೆಗೆ ಪ್ರತಿ ಮನೆ ಮನೆಯಲ್ಲಿ ಹಳ್ಳಿಯಿಂದ ಬರುವ ಹಾಲನ್ನ ಕೊಂಡುಕೊಳ್ಳುವ ಬದಲು ನಂದಿನಿ ಹಾಲನ್ನು ಖರೀದಿಸುತ್ತಿರುವುದು ಹೆಮ್ಮೆಯ ವಿಚಾರ. ಕೇವಲ ಹಾಸನ ಅಷ್ಟೇ ಅಲ್ಲ, ಚಿಕ್ಕಮಗಳೂರು ಮತ್ತು ಮಡಿಕೇರಿಯನ್ನು ಸೇರಿಸಿಕೊಂಡಿರುವ ಹಾಸನ ಹಾಲು ಒಕ್ಕೂಟ ಮೂರು ಜಿಲ್ಲೆಗಳಿಗೆ ತನ್ನ ಉತ್ಪನ್ನಗಳನ್ನು ಸರಬರಾಜು ಮಾಡುತ್ತದೆ.
ನಂದಿನಿ ಹಾಲಿನಿಂದ ಹಿಡಿದು ಬೆಣ್ಣೆ, ತುಪ್ಪ, ಪೇಡಾ, ಕೋವಾ, ಮೊಸರು, ಐಸ್ ಕ್ರೀಂ, ಹೀಗೆ ನಾನಾ ಉತ್ಪನ್ನಗಳನ್ನ ತಯಾರಿಸುವ ಹಾಸನ ಹಾಲು ಒಕ್ಕೂಟ ಪ್ರತಿ ವರ್ಷ 15 ರಿಂದ 20 ಕೋಟಿಗೂ ಅಧಿಕ ಉತ್ಪನ್ನಗಳ ಮಾರಾಟ ಮಾಡುತ್ತಿದೆ. ರಾಜ್ಯದಲ್ಲಿಯೇ ಎರಡನೇ ಹಾಲಿನ ಒಕ್ಕೂಟ ಎಂಬ ಹೆಗ್ಗಳಿಕೆ ಹೊಂದಿದೆ.
ಇಡೀ ಭಾರತವನ್ನೇ ಅಷ್ಟೇ ಅಲ್ಲ, ವಿಶ್ವವನ್ನೇ ಅಲ್ಲೋಲಕಲ್ಲೋಲ ಮಾಡಿದ ಕೋವಿಡ್-19 ಹಾಸನದ ಹಾಲು ಒಕ್ಕೂಟದ ಮೇಲೆಯೂ ಕೂಡ ಸಾಕಷ್ಟು ಪರಿಣಾಮ ಬೀರಿದೆ. ಮಾರ್ಚ್- ಆಗಸ್ಟ್ ತನಕ ಹಾಸನ ಹಾಲು ಒಕ್ಕೂಟದ ವಿವಿಧ ಉತ್ಪನ್ನಗಳು ಮಾರಾಟವಾಗಿದೆ ಒಕ್ಕೂಟದಲ್ಲೇ ಉಳಿದಿವೆ. ಇದನ್ನು ಸ್ವತಃ ರೇವಣ್ಣ ಒಪ್ಪಿಕೊಳ್ಳುತ್ತಾರೆ. ಈ ತಿಂಗಳು ಹಾಸನ ಹಾಲು ಒಕ್ಕೂಟದಿಂದ ಪ್ರತಿನಿತ್ಯ 11.5 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಅಲ್ಲದೆ ಕೋವಿಡ್-19 ಸಂಬಂಧದಲ್ಲಿ ಮೇಘಾಲಯ ಮತ್ತು ಕಾಶ್ಮೀರ ಭಾಗಗಳಿಗೆ ಸುಮಾರು 50 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡಿದ ಹಾಸನ ಹಾಲು ಒಕ್ಕೂಟಕ್ಕೆ ಆರು ತಿಂಗಳಲ್ಲಿ ಕೋಟ್ಯಂತರ ನಷ್ಟ ಉಂಟಾಗಿದೆ ಎಂದರು.
ಹಾಸನ ಹಾಲು ಒಕ್ಕೂಟದಲ್ಲಿ ತಯಾರಾಗುವ ಹಾಲಿನಪುಡಿ 4,500 ಟನ್ ಮಾರಾಟವಾಗದೇ ಉಳಿದಿದೆ. ಇದರಿಂದ ಒಕ್ಕೂಟಕ್ಕೆ ಭಾರಿ ನಷ್ಟ ಉಂಟಾಗಿದೆ. ಒಕ್ಕೂಟದಲ್ಲಿ ಮಾರಾಟವಾಗದೆ ಉಳಿದಿರುವ ಹಾಲಿನ ಪುಡಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿಗೆ ಬಂದು ಕೆಎಂಎಫ್ ಮೂಲಕ ಖರೀದಿಸಿ ನಷ್ಟ ಸರಿದೂಗಿಸಬೇಕು ಎಂದರು. ಈಗಾಗಲೇ 120 ಕೋಟಿಯಷ್ಟು ಹಾಲಿನ ಉತ್ಪನ್ನಗಳ ದಾಸ್ತಾನು ಮಾರಾಟವಾಗದೆ ಉಳಿದಿರುವುದು ಹಾಸನ ಹಾಲು ಒಕ್ಕೂಟಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಕೂಡಲೇ ತಿಳಿದಿರುವ ಹಾಗೆ ಪಶು ಆಹಾರದ ಬೆಲೆಯನ್ನು ಕೂಡ ಇಳಿಕೆ ಮಾಡಬೇಕು ಎಂದು ಕೂಡ ವಿನಂತಿ ಮಾಡಿದ್ದಾರೆ.
120 ಕೋಟಿ ಕೇವಲ ಆರು ತಿಂಗಳಲ್ಲಿ ದಾಸ್ತಾನು ಉಳಿದಿದ್ದು, ಲಾಭ ಮತ್ತು ನಷ್ಟದ ಬಗ್ಗೆ ಸಂಪೂರ್ಣ ಗೊತ್ತಾಗುವುದು ಮಾರ್ಚ್‌ವರೆಗಿನ ಲೆಕ್ಕಪತ್ರ ಮಾಡಿದಾಗ ಮಾತ್ರ. ಹೀಗಾಗಿ, ಕೊರೊನಾ ಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟ ಕೂಡ ತುಂಬಲಾರದ ನಷ್ಟ ಉಂಟಾಗಿದ್ದು, ಸರ್ಕಾರ ಕೂಡಲೇ ನಷ್ಟ ಸರಿದೂಗಿಸಲು ಮುಂದಾಗಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.