ಚನ್ನರಾಯಪಟ್ಟಣ: ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂಬ ಕಾರಣಕ್ಕೆ ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ ತಿಳಿಸಿದರು.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚನ್ನರಾಯಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆ ಇನ್ನೂ ಕೆಲಸ ಆರಂಭಿಸಿಲ್ಲ. ನಾವು ಕಾಂಗ್ರೆಸ್ ಪಕ್ಷದಿಂದ ಹೋರಾಟ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಇಲ್ಲಿಯ ಸ್ಥಳೀಯ ಶಾಸಕ ಶುಗರ್ ಫ್ಯಾಕ್ಟರಿ ಪರವಾಗಿ ನಿಂತಿದ್ದಾರೆ. ಅವರನ್ನು ಆಯ್ಕೆ ಮಾಡಿ ಕಳಿಸಿದ್ದು ರೈತರು, ನಾವು ರೈತರ ಪರ ಹೋರಾಟಕ್ಕೆ ಇಳಿದರೆ ಅವರು ಬರದೇ ಹೋದರೂ ನಾವು ಅವರನ್ನು ಕೇಳುತ್ತೇವೆ ಇದು ಎಷ್ಟು ಮಟ್ಟಿಗೆ ಸರಿ ಎಂದರು.
ಪ್ರತಿ ಸಲ ನೀವೇ ಹೇಳುತ್ತೀರ 30ನೇ ತಾರೀಖು ಕಾರ್ಖಾನೆಯನ್ನು ಶುರು ಮಾಡುತ್ತೀವಿ ಅಂತ ಹೇಳುತ್ತೀರ. ಏಕೆ ಕಾರ್ಖಾನೆಯವರು ಯಾರು ಬಂದು ಹೇಳುವುದಿಲ್ಲ?, ನೀವು ರೈತರ ಪರ ಇರಬೇಕೇ ವಿನಃ ಕಾರ್ಖಾನೆ ಪರವಾಗಿ ಇರಬಾರದು. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು. ಹಾಗೆ ಕೇಂದ್ರ ಸರ್ಕಾರದ ವಿರುದ್ಧವಾಗಿ ರೈತರಿಗೆ ಮಾರಕವಾದ ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಹಾಗೂ ಎಪಿಎಂಸಿ ಕಾಯ್ದೆ ತಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇದು ರೈತರ ಪರ ಸರ್ಕಾರವಲ್ಲ, ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಮಾಡಿ ರೈತರ ವಿರುದ್ಧ ನಡೆದುಕೊಳ್ಳುವುದು ಸರಿಯಲ್ಲ. ಶನಿವಾರದವರೆಗೆ ಗಡುವು ನೀಡಲಾಗಿದೆ. ಸರ್ಕಾರ ತನ್ನ ನಿಲುವು ಬದಲಿಸದಿದ್ದರೆ ಸೋಮವಾರದಿಂದ ಕಾಂಗ್ರೆಸ್ ಪಕ್ಷ ಹಾಗೂ ರೈತರು ಸೇರಿಕೊಂಡು ಉಗ್ರ ಹೋರಾಟವನ್ನು ನಾವು ಮಾಡುತ್ತೇವೆ ಎಂದರು.