ಶ್ರವಣಬೆಳಗೊಳ: ತೆಂಗಿನಕಾಯಿಯ ಗೊನೆ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆದಿದೆ. ಬಿ. ಚೋಳೇನಹಳ್ಳಿ ಗ್ರಾಮದ ಪ್ರಜ್ವಲ್ (16) ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ.
ವಿವರ: ಶ್ರವಣಬೆಳಗೊಳ ಹೊರವಲಯದ ಉತ್ತೇನಹಳ್ಳಿಯ ರವಿ ಮತ್ತು ಅನುಸೂಯ ದಂಪತಿ ಬಿ. ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದಾರೆ. ಇವರ ಪುತ್ರ ಪ್ರಜ್ವಲ್ ಪ್ರತಿದಿನ ತೋಟದ ಕೆಲಸ ಮುಗಿಸಿಯೇ ಕಾಲೇಜಿಗೆ ಹೋಗುತ್ತಿದ್ದ. ಅಂತೆಯೇ ನಿನ್ನೆ ಜಿಲ್ಲೆಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಮರದಿಂದ ತೆಂಗಿನಕಾಯಿಗಳು ಬಿದ್ದಿದ್ದು ಅವುಗಳನ್ನು ಒಂದೆಡೆಗೆ ಸಾಗಿಸುತ್ತಿದ್ದಾಗ, ಮರದ ಮೇಲಿಂದ ತೆಂಗಿನ ಗೊನೆ ಏಕಾಏಕಿ ಬಾಲಕನ ಮೈಮೇಲೆ ಬಿದ್ದಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಪ್ರಜ್ವಲ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆ ಗೋಡೆ ಕುಸಿದು ಬಾಲಕ ಸಾವು: ಇತ್ತೀಚೆಗೆ ನಿರ್ಮಾಣ ಹಂತದಲ್ಲಿದ್ದ ಶಾಲೆಯ ಗೋಡೆ ಕುಸಿದು ಬಾಲಕನೋರ್ವ ಸಾವನ್ನಪ್ಪಿ, ಇನ್ನೋರ್ವ ಬಾಲಕ ಗಾಯಗೊಂಡಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಶಾಲೆ ಪ್ರಾರಂಭವಾಗುವುದಕ್ಕೂ ಮುನ್ನ ಶಾಲೆಗೆ ಬಂದಿದ್ದ ಬಾಲಕರಿಬ್ಬರು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ತೆರಳಿದ್ದಾರೆ. ಈ ವೇಳೆ ಗೋಡೆ ಕುಸಿದು ಬಿದ್ದು, ವಿಶ್ರುತ್ ಎನ್ನುವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ನಂತರ ಮೂವರ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಟ್ರ್ಯಾಕ್ಟರ್ ಹರಿದು ಬಾಲಕ ಸಾವು: ಐಸ್ಕ್ರೀಂ ತರಲೆಂದು ಅಣ್ಣನ ಜೊತೆ ಅಂಗಡಿಗೆ ಹೋದ ಬಾಲಕನ ಮೇ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ನಡೆದಿತ್ತು. ಅಂಗಡಿಗೆ ಹೋಗುತ್ತಿದ್ದಾಗ ರಸ್ತೆ ಇಕ್ಕಟ್ಟಾಗಿದ್ದ ಕಾರಣ ಎದುರಿಗೆ ಬರುತ್ತಿದ್ದ ಟ್ರ್ಯಾಕ್ಟರ್ ಕಂಡು ಪಕ್ಕದಲ್ಲೇ ಇದ್ದ ಮರಳಿನ ದಿಬ್ಬದ ಮೇಲೆ ಬಾಲಕ ಏರಿದ್ದನು. ಆದರೆ ನಂತರ ಬಾಲಕ ದಿಬ್ಬದ ಮೇಲಿಂದ ಜಾರಿ ರಸ್ತೆಗೆ ಬಂದಿದ್ದನು, ಅದೇ ವೇಳೆ ಟ್ರ್ಯಾಕ್ಟರ್ ಹತ್ತಿರ ಬಂದಿದ್ದು, ಟ್ರ್ಯಾಕ್ಟರ್ನ ಹಿಂದಬಿ ಚಕ್ರ ಬಾಲಕ ಮೇಲೆ ಹರಿದಿದೆ. ಬಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದನು. ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಘಟನೆ ಸಂಭವಿಸಿದ ತಕ್ಷಣವೇ ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದನು
ಇದನ್ನೂ ಓದಿ: ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ: ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ