ಹಾಸನ: ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹತ್ತಾರು ಅಂಗಡಿಯನ್ನು ವಹಿಸಿಕೊಂಡು ಹಣ ವಸೂಲಿ ಮಾಡುತ್ತಿರುವರ ಹೆಸರು ಬಹಿರಂಗಪಡಿಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳದಿದ್ದರೇ ಶಾಸಕ ಪ್ರೀತಂ ಜೆ. ಗೌಡರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗಿಶ್ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಜನರ ಪರವಾಗಿ ಕೆಲಸ ಮಾಡುತ್ತಿದ್ದರೆ ನಿರುದ್ಯೋಗಿ ರಾಜಕಾರಣಿಗಳು ಕಲ್ಲುಹಾಕಲು ಹೊರಟಿದ್ದಾರೆ. ಕಟ್ಟಿನಕೆರೆಯಲ್ಲಿ ಹತ್ತು ಅಂಗಡಿಗಳನ್ನು ಒಬ್ಬೊಬ್ಬರು ವಹಿಸಿಕೊಂಡು ಹಣ ವಸೂಲಿ ಮಾಡಿಕೊಳ್ಳುತ್ತಿದ್ದು, ಇದನ್ನು ತಡೆಯುವ ಉದ್ದೇಶದಲ್ಲಿ ಒಳ್ಳೆ ಕೆಲಸ ಮಾಡಲು ಮುಂದಾಗಿರುವುದಾಗಿ ಶಾಸಕ ಪ್ರೀತಮ್ ಜೆ. ಗೌಡ ಹೇಳಿದ್ದಾರೆ ಎಂದರು.
ನಂತರ ಮಾತು ಮುಂದುವರೆಸಿ, ಶಾಸಕರೇ ನಿಮ್ಮ ಬಳಿ ಅಧಿಕಾರವಿದೆ. ಜಿಲ್ಲಾಡಳಿತವು ಮಾತು ಕೇಳುತ್ತಿರುವಾಗ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹತ್ತಾರು ಅಂಗಡಿವಹಿಸಿಕೊಂಡು ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅವರ ಹೆಸರು ಬಹಿರಂಗಪಡಿಸಲು ನಿಮಗೇಕೆ ಭಯವಾಗಿದೆ ಎಂದು ಪ್ರಶ್ನಿಸಿದರು.
ಕಟ್ಟಿನಕೆರೆಯಲ್ಲಿ ವ್ಯಾಪಾರ ಮಾಡುತ್ತಿರುವ ಬಡವರ ಅನ್ನವನ್ನು ಏತಕ್ಕೆ ಕಿತ್ತುಕೊಳ್ಳುತ್ತಿದ್ದೀರಿ ಎಂದು ನಾವು ಆರೋಪ ಮಾಡಿ ಹೋರಾಟ ನಡೆಸಿದ್ದೇವೆ. ಇಲ್ಲಿ ವ್ಯಾಪಾರ ಮಾಡಲು 290 ಜನರ ರೆಶ್ಯುಲೇಷನನ್ನು ಬಟ್ಟೆ ಗೋಪಾಲ್ ಮತ್ತು ನಾನು ಸೇರಿ ಮಾಡಿರುವುದಾಗಿ ಹೇಳಲಾಗಿದೆ. ಹಿಂದೆ ನಗರಸಭೆಯ ಸಭೆಯಲ್ಲಿ ಬಹುಮತದೊಂದಿಗೆ ಇದನ್ನು ಜಾರಿ ಮಾಡಲಾಗಿದ್ದು, ನಗರಸಭೆ ಆಯುಕ್ತರ ಸಹಿಯನ್ನು ನಗರಸಭೆ ಮಾಜಿ ಸದಸ್ಯ ಹೆಚ್.ಬಿ. ಗೋಪಾಲ್ ಹಾಕಲು ಸಾಧ್ಯವೇ ಎಂದು ಕಿಡಿಕಾರಿದ ಅವರು, ಮೊದಲು ಸತ್ಯತೆಯನ್ನು ತಿಳಿದು ಹೇಳಿಕೆ ನೀಡಬೇಕು ಜೊತೆಗೆ ಮಾತಿನಲ್ಲಿ ನಿಗಾವಿರಲಿ ಎಂದು ಸಲಹೆ ನೀಡಿದರು.
ನಿರುದ್ಯೋಗಿ ರಾಜಕಾರಣಿಗಳು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೇ ರಾಜಕಾರಣದಲ್ಲಿ ಉದ್ಯೋಗ, ನಿರುದ್ಯೋಗ ರಾಜಕಾರಣ ಇದೆಯಾ? ನನ್ನ 20 ವರ್ಷದ ರಾಜಕಾರಣದಲ್ಲಿ ಇದು ನನಗೆ ಗೊತ್ತಿಲ್ಲ. ಶಾಸಕರುಗಳ ಪಟೇಲರುಗಳಿಗೆ ಹತ್ತತ್ತು ಅಂಗಡಿಗಳನ್ನು ಮಾಡಿಕೊಟ್ಟು ವ್ಯವಹಾರ ಮಾಡಿಸಲು ಹೊರಟಿದ್ದೀರಾ ಎಂದು ಶಾಸಕರಿಗೆ ತಿರುಗೇಟು ನೀಡಿದರು.
ಅಮೃತ ಯೋಜನೆಗಾಗಿ ಅಗೆದ ರಸ್ತೆಗಳು ಇನ್ನು ದುರಸ್ತಿಯಾಗಿಲ್ಲ. ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ನಾವೆಲ್ಲಾ ನಿರುದ್ಯೋಗಿ ರಾಜಕಾರಣಿಗಳು ಎಂದು ಕರೆದಿದ್ದೀರಾ..ಮುಂದಿನ ಭಾನುವಾರದೊಳಗೆ ಹಾಸನದ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೇ ಮಂಗಳವಾರದ ದಿನ ನಾನು ಎರಡು ಚೀಲ ಜೋಳ ಹಾಕುತ್ತೇನೆ, ಜೊತೆಗೆ ಹೆಚ್.ಬಿ. ಗೋಪಾಲ್ ಕೂಡ ಜೋಳ ಹಾಕುತ್ತಾರೆ ಎಂದರು. ಈ ಕೆಲಸ ಹಾಕಬಾರದು ಎಂದರೇ ಭಾನುವಾರದೊಳಗೆ ರಸ್ತೆ ಸರಿ ಮಾಡಿ ಸಾರ್ವಜನಿಕರು ತಿರುಗಾಡಲು ಅವಕಾಶ ಮಾಡಿಕೊಡಿ ಎಂದರು.