ಹಾಸನ: ಮಹಾಮಳೆಗೆ ಹಲವೆಡೆ ಪ್ರವಾಹ ಉಂಟಾಗಿದ್ದು, ಜಿಲ್ಲೆಯ ಸಕಲೇಶಪುರ ತಾಲ್ಲೂಕಿಗೆ ಚಿಕ್ಕಮಗಳೂರು ಶಾಸಕ ಮತ್ತು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಇಬ್ಬರು ಸಂಪುಟದರ್ಜೆ ಸಚಿವರು, ಪ್ರವಾಹಕ್ಕೆ ಸಿಲುಕಿ ಸಾವಿಗೀಡಾಗಿದ್ದ ರಮೇಶ್ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಬಳಿಕ ಹಾನುಬಾಳುವಿಗೆ ಆಗಮಿಸಿ ಪ್ರವಾಹ ಪೀಡಿತ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಯನ್ನ ಆಲಿಸಿದ್ರು.
ಹಾನುಬಾಳು ಪ್ರದೇಶ ವೀಕ್ಷಣೆ ಬಳಿಕ ನಡಳ್ಳಿ, ದೇಕುಲ, ವೆಂಕಟಹಳ್ಳಿ, ಹುರುಡಿ ತೊಡಗೆ, ಬುರಗೇನಹಳ್ಳಿ, ಹುಷಾರುಮನೆ, ಮುಂತಾದ ಭಾಗಗಳಿಗೆ ಭೇಟಿ ನೀಡಿದರು. ನಂತರ ಮಂಗಳೂರು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 48ರ ಹೆಗ್ಗದ್ದೆ ಪ್ರದೇಶದಲ್ಲಿ ಹಾನಿಗೊಳಗಾಗಿದ್ದ ಪಶ್ಚಿಮಘಟ್ಟ ಪ್ರದೇಶವನ್ನ ಕೂಡಾ ವೀಕ್ಷಣೆ ಮಾಡಿದ್ರು.
ಇನ್ನು ವೀಕ್ಷಣೆಗೆ ಬಂದಿದ್ದ ಬಿಜೆಪಿ ಸಚಿವರುಗಳ ಜೊತೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಸಾಥ್ ನೀಡಿದ್ದಷ್ಟೆಯಲ್ಲದೇ ಹಾನಿಗೊಳಗಾದ ಪ್ರದೇಶದ ಸಂಪೂರ್ಣ ಮಾಹಿತಿ ನೀಡಿ, ಸಾಧ್ಯವಾದ್ರೆ ಆದಷ್ಟು ಬೇಗ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದ್ರು.