ಹಾಸನ: ಕಳೆದ ಒಂದು ತಿಂಗಳಿನಿಂದ ಗೊಂದಲದ ಗೂಡಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅಂತೂ ಇಂತೂ ಅಭ್ಯರ್ಥಿ ಘೋಷಣೆಯಾಗುವ ಮುನ್ಸೂಚನೆ ದೊರಕಿದೆ. ಇಂದು ಭವಾನಿ ರೇವಣ್ಣ ಅವರಿಗೆ ಸ್ವಾಗತ ಕೋರಲು ಬೃಹತ್ ವೇದಿಕೆ ಸಜ್ಜಾಗಿದ್ದು, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಹೀಗಾಗಿ, ಬಿಜೆಪಿ ಮತ್ತು ಜೆಡಿಎಸ್ ನಡುವೆ ಇಂದಿನಿಂದ ಜಟಾಪಟಿ ಶುರುವಾಗಲಿದೆ.
ಭವಾನಿ ರೇವಣ್ಣ ಟೆಂಪಲ್ ರನ್: ಎರಡು ದಿನಗಳ ಹಿಂದಷ್ಟೇ ಬಿಜೆಪಿ ಮಹಾ ನಾಯಕರು ಜಿಲ್ಲೆಗೆ ಆಗಮಿಸುವ ಮೂಲಕ ಶಕ್ತಿ ಪ್ರದರ್ಶನ ತೋರಿಸಿದ್ರು. ಇದಕ್ಕೆ ಉತ್ತರ ಕೊಡಲು ಈಗ ಜೆಡಿಎಸ್ ಸಜ್ಜಾಗಿದೆ. ಹೊಳೆನರಸಿಪುರದಲ್ಲಿ ಭವಾನಿ ರೇವಣ್ಣ ಇಂದಿನಿಂದ ಟೆಂಪಲ್ ರನ್ ಆರಂಭಿಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಪಟ್ಟಣದ ಲಕ್ಷ್ಮೀ ರಂಗನಾಥ ಸ್ವಾಮಿ, ಮಾವಿನಕೆರೆ ಬೆಟ್ಟ ಸೇರಿದಂತೆ 9 ದೇವಾಲಯಕ್ಕೆ ಭೇಟಿ ನೀಡಿ ನವದೇವತೆಗಳ ಆಶೀರ್ವಾದ ಪಡೆದು ಮಧ್ಯಾಹ್ನ ಪೂರ್ವಾಭಿಮುಖವಾಗಿ ಹಾಸನ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ
ಕುಮಾರಸ್ವಾಮಿ ಹೇಳಿದ ಸಾಮಾನ್ಯ ಕಾರ್ಯಕರ್ತ ಇವರೇನಾ?: ಹಾಸನ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಪ್ರೀತಂ ಗೌಡ ನನ್ನ ಕ್ಷೇತ್ರದಲ್ಲಿ ಯಾರೇ ಬಂದು ನಿಂತರೂ ಗೆಲುವು ನನ್ನದೇ. ಅದರಲ್ಲೂ ರೇವಣ್ಣ ಸ್ಪರ್ಧೆ ಮಾಡಿದರೆ 50 ಸಾವಿರ ಮತಗಳ ಅಂತರದಿಂದ ಗೆದ್ದು ತೋರಿಸುತ್ತೇನೆ. ಹಾಗೇನಾದ್ರೂ ಒಂದು ಮತ ಕಡಿಮೆ ಆದರೂ ನಾನು ಮತ್ತೆ ಮರುಚುನಾವಣೆಗೆ ಹೋಗುತ್ತೇನೆ ಅಂತ ಸವಾಲು ಹಾಕಿದ್ದಾರೆ. ಈ ಸವಾಲಿಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ರೇವಣ್ಣನೇ ಬೇಕಿಲ್ಲ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ತಂದು ನಿಲ್ಲಿಸಿ ಈ ಬಾರಿ ಗೆಲ್ಲುತ್ತೇವೆ ಅಂತ ಮರು ಸವಾಲು ಹಾಕಿದ್ದರು.
ಇದಕ್ಕೆ ಪುಷ್ಠಿಕೊಡುವಂತೆ ಮಾಜಿ ಸಚಿವ ರೇವಣ್ಣ ಕೂಡ ನಾನಾದರೆ ಐವತ್ತು ಸಾವಿರ, ಸಾಮಾನ್ಯ ಕಾರ್ಯಕರ್ತನಾದರೆ 80 ಸಾವಿರ ಮತಗಳ ಅಂತರ ಬೇಕಾಗುತ್ತೆ ಅಂತ ಲೇವಡಿ ಮಾಡುವ ಮೂಲಕ ನಾವು ಸಿದ್ಧರಿದ್ದೇವೆ ಎಂದು ಪಂಥಾಹ್ವಾನಕ್ಕೆ ಮುನ್ನುಡಿ ಹಾಡಿದ್ರು. ಇದರ ಬೆನ್ನಲ್ಲೇ ಇದೀಗ ಭವಾನಿ ರೇವಣ್ಣ ಇಂದು ಎಂಟ್ರಿ ಕೊಡುತ್ತಿದ್ದು, ಕುಮಾರಸ್ವಾಮಿ ಹೇಳಿದ ಸಾಮಾನ್ಯ ಕಾರ್ಯಕರ್ತ ಇವರೇನಾ? ಎನ್ನುವ ಕುತೂಹಲವಿದೆ.
ಇದನ್ನೂ ಓದಿ: ನನ್ನ ಸ್ಪರ್ಧೆ ನಿರ್ಧಾರ ಮಾಡೋಕೆ ಅವರ್ಯಾರು?: ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ಗರಂ
ಭವಾನಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ: ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕಮಲಾಕರ್ ಎಂಬ ಜ್ಯೋತಿಷಿಯೊಬ್ಬರು ಭವಾನಿ ರೇವಣ್ಣರ ಜ್ಯೋತಿಷ್ಯವನ್ನು ನುಡಿದಿದ್ದಾರೆ. ಹಾಲಿ ಶಾಸಕರು ಎಷ್ಟೇ ತಿಪ್ಪರಲಾಗ ಹಾಕಿದ್ರು ಭವಾನಿ ಎಂಬ ದುರ್ಗಿಯನ್ನ ಸೋಲಿಸಲು ಸಾಧ್ಯವಿಲ್ಲ. ಭವಾನಿ ರೇವಣ್ಣರ ಜಾತಕದಲ್ಲಿ ರಾಜಯೋಗದ ಜೊತೆಗೆ, ಹಂಸ ಮಾಳವಿಕ ಯೋಗವಿದೆಯಂತೆ. ರಾಜಕೀಯಕ್ಕೆ ಬರಬೇಕೆನ್ನುವುದು ಪರಮ ಲಿಖಿತ, ದೇವಾನುದೇವತೆಗಳ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಹಾಗಾಗಿ, ಭವಾನಿ ರೇವಣ್ಣ ಹಾಸನದಿಂದ ನಿಂತರೆ ಗೆಲುವಿಗೆ ನಾಂದಿ ಹಾಡುತ್ತಾರೆ, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಸೀರೆ ಹಂಚಿ ರಾಜಕೀಯ ಮಾಡ್ಬೇಕಾ?: ಸಿ.ಪಿ.ಯೋಗೇಶ್ವರ್ ವಿರುದ್ದ ಹೆಚ್ಡಿಕೆ ವಾಗ್ದಾಳಿ