ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಕಳುಹಿಸಿದ್ರೆ ನಮ್ಮ ಸ್ಟೇಟಸ್ ಕಡಿಮೆಯಾತ್ತೆ ಅಂತಾ ಯೋಚನೆ ಮಾಡೋರೆ ಹೆಚ್ಚು. ಆದರೆ, ಇಂಥ ಮನಸ್ಥಿತಿಯ ಪೋಷಕರ ಮನವೊಲಿಸಿ ಅವರ ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ದಾಖಲು ಮಾಡಿಸುವಲ್ಲಿ ಇಬ್ಬರು ಸರ್ಕಾರಿ ಶಿಕ್ಚಕಿಯರು ಸೈ ಎನಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳೆದ 4 ವರ್ಷಗಳ ಹಿಂದೆ ಮಕ್ಕಳಿಲ್ಲದೇ ಒಂದು ವರ್ಷ ಬಾಗಿಲು ಹಾಕಿತ್ತು. ಆದರೆ, 2017ರಲ್ಲಿ ಒಬ್ಬ ವಿದ್ಯಾರ್ಥಿ ಈ ಶಾಲೆಗೆ ದಾಖಲಾತಿಗಾಗಿ ಬಂದ ವೇಳೆ ಶಿಕ್ಷಣ ಇಲಾಖೆ ಶಿವಗಂಗಮ್ಮ ಎಂಬ ಶಿಕ್ಷಕಿಯನ್ನ ಈ ಶಾಲೆಗೆ ನೇಮಕ ಮಾಡಿ, ಆ ವಿದ್ಯಾರ್ಥಿಗೆ ದಾಖಲಾತಿ ನೀಡಿತು. ಕೇವಲ ಒಬ್ಬ ವಿದ್ಯಾರ್ಥಿ ದಾಖಲಾದ ಈ ಶಾಲೆಗೆ ಕೇವಲ 2 ವರ್ಷದಲ್ಲಿ 30 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಈ ಶಿಕ್ಷಕಿಯರ ಪರಿಶ್ರಮ ದೊಡ್ಡದು : ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇವತ್ತು 30ಕ್ಕೆ ಏರಿಕೆಯಾಗಿರುವುದರ ಹಿಂದೆ ಇಬ್ಬರು ಶಿಕ್ಷಕಿಯರ ನಿರಂತರ ಪರಿಶ್ರಮವಿದೆ. ಅವರೇ ಹೆಚ್ ಎಸ್ ಶಿವಗಂಗಮ್ಮ ಮತ್ತು ಸಹೋದ್ಯೋಗಿ ಶಿಕ್ಷಕಿ ಇರ್ಷಾದ್ ಉನ್ನಿಸಾ. ಇವರಿಬ್ಬರು ಸೇರಿ ರಾಮೇನಹಳ್ಳಿಯ ಸುತ್ತಮುತ್ತಲಿನ 5ಕ್ಕೂ ಹೆಚ್ಚು ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನ ಮನವೊಲಿಸಿ ಕೇವಲ 2 ವರ್ಷದಲ್ಲಿ ಈ ಶಾಲೆಗೆ 30 ಮಂದಿಯನ್ನ ದಾಖಲು ಮಾಡಿಸಿರೋದು ನಿಜಕ್ಕೂ ಶ್ಲಾಘನೀಯ.
ನಲಿ-ಕಲಿಯಿಂದ ಹಿಡಿದು, ವಿದ್ಯಾರ್ಥಿಗಳ ಓದಿನ ಗುಣವಟ್ಟ ಹೆಚ್ಚಿಸುವಂತಹ ಎಲ್ಲಾ ಪರಿಕರದೊಂದಿಗೆ ಪಾಠ ಮಾಡುತ್ತಿದ್ದು, ವಿದ್ಯಾರ್ಥಿಗಳು ಖುಷಿ ಖುಷಿಯಿಂದ ಶಾಲೆಗೆ ಬರುತ್ತಾರೆ. ಹೀಗಾಗಿ, ಇನ್ಮುಂದೆ ದಾಖಲಾತಿ ಮತ್ತಷ್ಟು ಹೆಚ್ಚಿಸುವ ಗುರಿ ಇಟ್ಟುಕೊಂಡಿದ್ದಾರೆ ಈ ಶಿಕ್ಷಕಿಯರು. ಕೊರೊನಾ ಸಂದರ್ಭದಲ್ಲಿ 'ವಿದ್ಯಾಗಮ' ಕಾರ್ಯಕ್ರಮದ ಮೂಲಕ ಶಾಲೆಯ ಸಮೀಪದ ಮನೆಯೊಂದರ ಜಗುಲಿ ಮೇಲೆ ಮತ್ತು ದೇವಾಸ್ಥಾನದ ಆವರಣದ ಸಮೀಪ ಪಾಠ ಮಾಡಿದ್ದಾರೆ. ಪರಿಕರ ಆಧಾರಿತ ಪಾಠ ಮಾಡುವುದರಲ್ಲಿ ಇವರು ಎಂದೂ ಹಿಂದೆ ಬಿದ್ದಿಲ್ಲ.
ಈ ಶಿಕ್ಷಕಿಯರು ಇಲ್ಲೇ ಇರ್ಬೇಕು ಅಂತಾರೆ ಜನ : ನಮ್ಮ ಗ್ರಾಮದಲ್ಲಿರುವ ಈ ಶಾಲೆ ಹಿಂದೆ ಮುಚ್ಚಿತ್ತು. ಆದರೆ, ಈಗ 30 ಮಂದಿ ಮಕ್ಕಳಿದ್ದಾರೆ. ಇದಕ್ಕೆಲ್ಲಾ ಕಾರಣ ಈ ಇಬ್ಬರು ಮಹಿಳಾ ಶಿಕ್ಷಕಿಯರು. ಹಾಗಾಗಿ, ಹೆಣ್ಣು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಮಾಡುತ್ತಾಳೆ ಎಂಬುದನ್ನ ತೋರಿಸುವ ಮೂಲಕ ಹೆಣ್ಮಕ್ಕಳೇ ಸ್ಟ್ರಾಂಗು ಎಂಬುದನ್ನ ಸಾಧಿಸಿ ತೋರಿಸಿದ್ದಾರೆ. ಹಾಗಾಗಿ, ನಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಕಳುಹಿಸದೇ ಇಲ್ಲೇ ಓದಿಸುತ್ತೇವೆ. ಜೊತೆಗೆ ಇದೇ ಶಿಕ್ಷಕರು ಇರಬೇಕು. ವರ್ಗಾವಣೆ ಸಂದರ್ಭ ಎದುರಾದ್ರೆ, ಹೋರಾಟ ಮಾಡಿಯಾದ್ರೂ ಈ ಶಿಕ್ಷಕರನ್ನ ಇಲ್ಲೇ ಉಳಿಸಿಕೊಳ್ಳುತ್ತೇವೆ ಅಂತಾರೆ ರಾಮೇನಹಳ್ಳಿ ಗ್ರಾಮಸ್ಥರು.
ಶಿವಗಂಗಮ್ಮ ಮತ್ತು ಇರ್ಷಾದ್ ಉನ್ನಿಸಾ ಎಂಬ ಈ ಇಬ್ಬರು ಶಿಕ್ಷಕರುಗಳ ಸಾಧನೆ ನಿಜಕ್ಕೂ ಹೆಮ್ಮೆ ಪಡುವಂತಹುದು. ರಾಮೇನಹಳ್ಳಿಯ ಶಾಲೆಯಲ್ಲಿ ಸದ್ಯ 2 ಕೊಠಡಿಯಿದ್ದು, ಅದ್ರಲ್ಲಿ ಒಂದು ಕೊಠಡಿ ದುರಸ್ಥಿಯಲ್ಲಿರುವುದರಿಂದ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ದುರಸ್ಥಿ ಮಾಡಿಸಲು ಈಗಾಗಲೇ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, 2 ತಿಂಗಳಲ್ಲಿ ಶಾಲೆಯ ದುರಸ್ಥಿ ಕೆಲಸವಾಗಲಿದೆ. ಗ್ರಾಮಸ್ಥರು ಸಾಕಷ್ಟು ಪ್ರೋತ್ಸಾಹ, ಸಹಕಾರ ನೀಡುವುದರಿಂದ ಮುಂದಿನ ದಿನದಲ್ಲಿ ಶಾಲೆಯ ದಾಖಲಾತಿಯಲ್ಲಿ ಮತ್ತಷ್ಟು ಹೆಚ್ಚಳ ಕಾಣಲಿದೆ ಅಂತಾರೆ ಕ್ಲಸ್ಟರ್ ಅಧಿಕಾರಿ ರೌಸನ್ ಅರಾ.ಅಲ್ಲದೇ ಈ ಶಿಕ್ಷಕಿಯರ ಕಾರ್ಯವನ್ನು ಅರಸೀಕೆರೆ ಶಿಕ್ಷಣಾಧಿಕಾರಿ ಮೋಹನ್ ಕೂಡಾ ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರಿ ಶಾಲೆ ಎಂದ್ರೆ ಮೂಗು ಮುರಿಯುವವರೇ ಹೆಚ್ಚು. ಅಂತಹುದರಲ್ಲಿ ಮಕ್ಕಳಿಲ್ಲದೇ ಮುಚ್ಚಿದ ಶಾಲೆಯಲ್ಲಿ ಈಗ 30 ಮಕ್ಕಳನ್ನು ದಾಖಲಿಸುವಂತೆ ಮಾಡಿರುವುದು ಸುಲಭದ ಮಾತಲ್ಲ. ಈ ಶಿಕ್ಷಕಿಯರ ಸಾಧನೆ ನಿಜಕ್ಕೂ ಮೆಚ್ಚುವಂತಹುದು. ಈ ಮಹಿಳಾ ಶಿಕ್ಷಕಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.