ಹಾಸನ: ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನವನ್ನು ಎಸ್‌ಟಿ ಅಭ್ಯರ್ಥಿಗೆ ಮೀಸಲಿಡುವ ಮೂಲಕ ಬಿಜೆಪಿ ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂದು ಶಾಸಕ ಶಿವಲಿಂಗೇ ಗೌಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಿಯಮ ಮೀರಿ ಅರಸೀಕೆರೆ ನಗರಸಭೆ ಅಧ್ಯಕ್ಷ ಗಾದಿಗೆ ಮೀಸಲಾತಿ ಪ್ರಕಟಿಸಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಕಾಣದ ಕೈಗಳು, ಹಿಂಬದಿಯಿಂದ ಯಡಿಯೂರಪ್ಪ ಅವರ ಕೈಯಲ್ಲಿ ಆಡಳಿತ ನಡೆಸುತ್ತಿವೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರಿಗೆ ನೇರವಾಗಿ ಆಡಳಿತ ನಡೆಸಲು ಬಿಡುತ್ತಿಲ್ಲ. ಯಡಿಯೂರಪ್ಪ ಬಹುಮತ ಇಲ್ಲದೆ ಮುಖ್ಯಮಂತ್ರಿ ಆಗಿದ್ದಾರೆಯೇ?. ಮೀಸಲಾತಿ ಪ್ರಕಟಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಈ ಬಗ್ಗೆ ನಾನು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದು, ನ್ಯಾಯಾಧೀಶರು ನಮಗೆ ನ್ಯಾಯ ಕೊಡಬೇಕು. ರಾಜಕೀಯ ಸ್ವಾರ್ಥಕ್ಕಾಗಿ ಬಿಜೆಪಿ ಸರ್ಕಾರ ರಾಜಕೀಯ ಪ್ರೇರಿತ ಮೀಸಲಾತಿ ಮಾಡಿದ್ದಾರೆ ಎಂದು ದೂರಿದರು.
ಕಾರ್ಯಾಂಗ, ಶಾಸಕಾಂಗ ಎರಡೂ ನ್ಯಾಯಾಂಗಕ್ಕೆ ಮೋಸ ಮಾಡುತ್ತಿವೆ, ಅಪಚಾರ ಮಾಡುತ್ತಿವೆ. ಅರಸೀಕೆರೆ ನಗರಸಭೆ ಒಟ್ಟು 31 ಸದಸ್ಯ ಬಲ ಹೊಂದಿದೆ. ಜೆಡಿಎಸ್ 21, ಕಾಂಗ್ರೆಸ್ 01, ಬಿಜೆಪಿ 05, ಸ್ವತಂತ್ರ ಅಭ್ಯರ್ಥಿ 3 ಜನ ಇದ್ದಾರೆ. ಆದರೆ ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಎಸ್‌ಟಿ ಗೆ ಮೀಸಲಾಗಿದೆ.
ಕೇವಲ 5 ಜನ ಸದಸ್ಯ ಬಲ ಹೊಂದಿರುವ ಬಿಜೆಪಿಯಲ್ಲಿ ಮಾತ್ರ ಎಸ್‌ಟಿ ಸದಸ್ಯರಿದ್ದಾರೆ. ಹೀಗಾಗಿ ಬಹುಮತ ಪಡೆದರೂ ಜೆಡಿಎಸ್‌ಗೆ ಅರಸೀಕೆರೆ ನಗರಸಭೆ ಅಧ್ಯಕ್ಷ ಗಾದಿ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.