ಹಾಸನ: ಜಮೀನಿನಲ್ಲಿ ಕೆಲಸ ಮಾಡದಂತೆ ಸ್ಥಳೀಯರು ಹಾಗೂ ನಟ ಯಶ್ ಬೆಂಬಲಿಗರ ನಡುವೆ ನಡೆಯುತ್ತಿರುವ ಗಲಾಟೆ ಸಂಬಂಧ ನಟ ಯಶ್ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
ಹಾಸನದಲ್ಲಿನ ಜಮೀನಿನ ಬಳಿ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಹಾಗೂ ಯಶ್ ಅಭಿಮಾಣಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆ ಮಾಹಿತಿ ಪಡೆಯುವ ಸಲುವಾಗಿ ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಗ್ರಾಮಸ್ಥರು ಹಾಗೂ ಯಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಸದ್ಯ ಗ್ರಾಮಸ್ಥರು ಹಾಗೂ ಯಶ್ ಬೆಂಬಲಿಗರ ನಡುವೆ ಪೊಲೀಸರು ಸಂಧಾನ ಕಾರ್ಯ ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ವಾಗ್ವಾದಕ್ಕೆ ಜಮೀನು ವಿವಾದ ಕಾರಣ..?
ಯಶ್ ತಾಯಿ ಮೂಲತಃ ಹಾಸನ ಜಿಲ್ಲೆಯವರು. ಹಾಸನ ನಗರದಲ್ಲಿ ಒಂದು ಮನೆ ಖರೀದಿಸಿದ್ದು, ಹಾಸನ ತಾಲೂಕಿನ ತಿಮ್ಲಾಪುರ ಗ್ರಾಮದ ಸಮೀಪ ಸುಮಾರು 80 ಎಕರೆ ಜಮೀನನ್ನು ಖರೀದಿಸಿದ್ದಾರೆ.
ಈ ಜಮೀನು ವಿಚಾರದಲ್ಲಿಯೇ ಯಶ್ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ಆರಂಭವಾಗಿದೆ. ನಾವು ಈಗಾಗಲೇ ಯಶ್ ಅವರ ಜಮೀನಿಗೆ ಓಡಾಡಲು ಜಾಗ ಕೊಟ್ಟಿದ್ದೇವೆ. ಆದರೆ ಅವರು ಸರ್ಕಾರಿ ನಕ್ಷೆ ಪ್ರಕಾರ ನಮ್ಮ ಜಮೀನಿಗೆ ಓಡಾಡಲು ಮತ್ತೊಂದು ರಸ್ತೆಯಿದೆ ಎಂದು ಹೇಳುತ್ತಾ ನಮ್ಮ ಜಮೀನಿನ ಮೇಲೆ ರಸ್ತೆ ಮಾಡಲು ಬಂದಿದ್ದಾರೆ ಎಂದು ತಿಮ್ಲಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ, ತಾತ-ಮುತ್ತಾತಂದಿರ ಕಾಲದಿಂದ ನಾವು ಉಳುಮೆ ಮಾಡುತ್ತಿರುವ ಜಮೀನಿನ ಮೇಲೆ ಮತ್ತೆ ದಾರಿ ಕೊಡಲ್ಲ ಅಂತಿದ್ದಾರೆ.
ಇದೇ ವಿಚಾರವಾಗಿ ಈಗ ತಿಮ್ಲಾಪುರ ಗ್ರಾಮಸ್ಥರು ಮತ್ತು ಯಶ್ ಬೆಂಬಲಿಗರ ನಡುವೆ ಕಿತ್ತಾಟವಾಗುತ್ತಿದೆ ಎಂದು ತಿಳಿದುಬಂದಿದೆ. ಸದ್ಯ ಪ್ರಕರಣ ದುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಸಂಧಾನ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ.