ಹಾಸನ: ನಾನು ಕೂಲಿ ಕಾರ್ಮಿಕ ಅಷ್ಟೇ ಸಿನಿಮಾದ ಯಶಸ್ಸಿನ ಬಗ್ಗೆ ನಿರ್ಮಾಪಕರನ್ನು ಕೇಳಬೇಕು ಎಂದು ಚಿತ್ರನಟ ದರ್ಶನ್ ಹೇಳಿದ್ದಾರೆ.
ಮಹಿಳಾ ದಿನಾಚರಣೆಯ ನಿಮಿತ್ತ ಭಾನುವಾರ ಹಾಸನಕ್ಕೆ ಆಗಮಿಸಿದ್ದ ವೇಳೆ ರಾಬರ್ಟ್ ಚಿತ್ರದ ವಿಚಾರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ನನ್ನನ್ನು ಕರೆದಿದ್ದಾರೆ ಹೀಗಾಗಿ ಹಾಸನಕ್ಕೆ ಬಂದಿದ್ದೇನೆ. ಅಭಿಮಾನಿಗಳು ಚಿತ್ರ ನೋಡಿ ಖುಷಿ ಪಟ್ಟರೆ ಅದೇ ನನಗೆ ದೊಡ್ಡ ಖುಷಿ ಎಂದರು.
ಇನ್ನು ವೇದಿಕೆಯಲ್ಲಿ ಮಾತನಾಡಿದ ಅವರು ನಾನು ಮತ್ತು ಪ್ರಜ್ವಲ್ ರೇವಣ್ಣ 8 ವರ್ಷದ ಸ್ನೇಹಿತರು, ವರ್ಷಗಳ ಹಿಂದೆ ನಾನು ಪ್ರಜ್ವಲ್ ಕೇರಳಕ್ಕೆ ಬೈಕ್ ಸವಾರಿ ಮಾಡಿದ್ದೆವು. ಕೇರಳಕ್ಕೆ ಹೋಗಿ ಬರುವತನಕ ಪ್ರಜ್ವಲ್ ರೇವಣ್ಣ ಬೈಕ್ ಓಡಿಸಿದ್ದರು. ಅದು ಅವರ ತಾಯಿಗೂ ಕೂಡ ಗೊತ್ತಿಲ್ಲ ಎಂದು ಇವರಿಬ್ಬರ ಗೆಳೆತನದ ಬಗ್ಗೆ ವೇದಿಕೆಯಲ್ಲಿ ಹಂಚಿಕೊಂಡರು. ಅಲ್ಲದೇ ಹಾಸನದ ಜನರ ಕೈಗೆ ಸುಲಭವಾಗಿ ಸಿಗುವ ಎಂಪಿ ಎಂದರೆ ಪ್ರಜ್ವಲ್ ಮಾತ್ರ ಎಂದು ವೇದಿಕೆಯಲ್ಲಿ ಪ್ರಜ್ವಲ್ ಅವರನ್ನು ಹಾಡಿ ಹೊಗಳಿದ್ದಾರೆ.
ಬಳಿಕ ಮಾತನಾಡಿದ ಜಿಲ್ಲಾ ಪಂಚಾಯಿತಿಯ ಸದಸ್ಯೆ ಭವಾನಿ ರೇವಣ್ಣ, ದರ್ಶನ್ ಈ ಕಾರ್ಯಕ್ರಮಕ್ಕೆ ಬಂದಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ, ಒಬ್ಬ ಕಲಾವಿದನಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಅಷ್ಟೇ. ಅವರಿಗೆ ಅತಿಥಿ ಸತ್ಕಾರ ಮಾಡಿ ಕಳಿಸುವುದು ನಮ್ಮ ಧರ್ಮ. ಹಾಸನದ ಜನತೆಯ ಮೂಲಕ ವೇದಿಕೆಯಲ್ಲಿ ನಿಮ್ಮ ಪರವಾಗಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದರು.
ಇನ್ನು ಡಿ ಬಾಸ್ ಹಾಸನಕ್ಕೆ ಆಗಮಿಸಿದ ಹಿನ್ನೆಲೆ, ಅಭಿಮಾನಿಗಳು ಒಳ ನುಸುಳದಂತೆ ಸಂಸದರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಾಬರ್ಟ್ ಚಿತ್ರ ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಹಾಸನಕ್ಕೆ ಬಂದಿದ್ದ ಡಿ ಬಾಸ್ ನೋಡಲು ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಡಿ ಬಾಸ್ ನೋಡಿದ ಅಭಿಮಾನಿಗಳು ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.