ಚನ್ನರಾಯಪಟ್ಟಣ/ಹಾಸನ: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರು ಹಾಗೂ ರೈತರಿಗೆ ನೆರವಾಗುವ ಸಲುವಾಗಿ ನರೇಗಾ ಯೋಜನೆಯಡಿ 53.76 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಬಾಗೂರು ಹೋಬಳಿಯ ಕೆ.ದಾಸಾಪುರ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಜಲಾನಯನ, ಅರಣ್ಯೀಕರಣ, ಬದು ನಿರ್ಮಾಣ, ಕೃಷಿ ಹೊಂಡ, ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಇನ್ನು ತಾಲೂಕಿನಲ್ಲಿ 300 ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ 80 ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕೆಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ದಾಸಾಪುರ ಕೆರೆಯು 110 ಎಕರೆ ವಿಸ್ತೀರ್ಣ ಹೊಂದಿದ್ದು, 5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಇನ್ನು ಸರ್ಕಾರವು ದಿನಕ್ಕೆ ಒಬ್ಬ ಕಾರ್ಮಿಕನಿಗೆ 275 ರೂ.ನಂತೆ ಒಟ್ಟು 100 ದಿನ ಕೆಲಸ ನೀಡಲಿದೆ. ಇದರಿಂದ 27,500 ರೂ. ಹಣ ಸಿಗಲಿದೆ ಎಂದರು.