ಹಾಸನ: ರೋಡಲ್ಲಿ ಹೊರಟಿದ್ದ ಮಾರಿಯನ್ನು ಯಾರೋ ಮನೆಗೆ ಕರೆದುಕೊಂಡು ಬಂದಂತಾಗಿದೆ ಹಾಸನ ಜಿಲ್ಲೆಯ ಪರಿಸ್ಥಿತಿ. ದಿನದಿಂದ ದಿನಕ್ಕೆ ಹೆಮ್ಮಾರಿಯ ಉಪಟಳ ಹೆಚ್ಚಾಗುತ್ತಿದೆ. ಲಾಕ್ಡೌನ್ ತೆರೆದ ಬಳಿಕ ಹೊರರಾಜ್ಯದಿಂದ ಬರುತ್ತಿರುವವರ ಜೊತೆ ಕೊರೊನಾ ಸಹ ನಾಡಿನೊಳಗೆ ಆಗಮಿಸುತ್ತಿದೆ.
![2 More Police infected by coronavirus in Hassan today](https://etvbharatimages.akamaized.net/etvbharat/prod-images/kn-hsn-05-corona-av-7203289_20062020143721_2006f_1592644041_1027.jpg)
ನಿನ್ನೆ 14 ಜನರಲ್ಲಿ ಕಾಣಿಸಿಕೊಂಡಿದ್ದ ಸೋಂಕು, ಇಂದು ಇಬ್ಬರು ಪೊಲೀಸರು ಸೇರಿ 16 ಜನರಲ್ಲಿ ಕಾಣಿಸಿಕೊಂಡಿದೆ. ಇದರಿಂದ ಜನ ಆತಂಕಗೊಂಡಿದ್ದರೆ, ಜಿಲ್ಲಾಡಳಿತ ಮಾತ್ರ ಜನರಲ್ಲಿ ಯಾವುದೇ ಭಯ ಬೇಡ ಎನ್ನುತ್ತಿದೆ.
ಲಾಕ್ಡೌನ್ ಆದ ಸಂದರ್ಭದಲ್ಲಿ ಒಂದೇ ಒಂದು ಪ್ರಕರಣವೂ ಇಲ್ಲದೆ ಹಸಿರು ವಲಯವಾಗಿದ್ದ ಹಾಸನದಲ್ಲಿ ಈಗ ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಾ ಭಯ ಮತ್ತು ಆತಂಕ ಸೃಷ್ಟಿಯಾಗುತ್ತಿದೆ.
ಇದಲ್ಲದೆ ಇಂದು ಮತ್ತಿಬ್ಬರು ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು ಉಳಿದಂತೆ ಮುಂಬೈ ಮತ್ತು ತಮಿಳುನಾಡಿನಿಂದ ಬಂದ ಪ್ರಯಾಣಿಕರ ದೇಹದಲ್ಲಿ ಸೋಂಕು ದೃಢವಾಗಿದೆ.
ಪೊಲೀಸರಲ್ಲಿಯೂ ಸೋಂಕು ಕಾಣಿಸಿಕೊಂಡಿರುವುದು ಆತಂಕ ಹೆಚ್ಚಲು ಕಾರಣವಾಗಿದೆ. ಸದ್ಯ ಇವರೆಲ್ಲರನ್ನು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 287 ಪ್ರಕರಣ ದಾಖಲಾಗಿದ್ದು, ತ್ರಿಶಕದತ್ತ ದಾಪುಗಾಲು ಹಾಕುತ್ತಿದೆ. ಹೀಗಾಗಿ ಸದ್ಯ ಹೊರಗಿನಿಂದ ಬರುತ್ತಿರುವವರನ್ನ ನಿಷೇಧಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ. ಆದರೆ ಹೊರ ರಾಜ್ಯದಿಂದ ಬರುವ ಕನ್ನಡಿಗರಿಗೆ ಆ ರೀತಿಯ ನಿರ್ಬಂಧವನ್ನು ಹೆಚ್ಚು ದಿನಗಳ ಕಾಲ ನಿರ್ಬಂಧಿಸಲು ಸಾಧ್ಯವಿಲ್ಲ ಅದು ಕಾನೂನಿನಡಿ ಬರುವುದಿಲ್ಲ ಎಂಬುದು ಸಚಿವರುಗಳ ಮಾತಾಗಿದೆ.