ಗದಗ: ಕಳೆದ ಸೋಮವಾರ ರಾಕಿಂಗ್ ಸ್ಟಾರ್ ಯಶ್ 38ನೇ ಜನ್ಮದಿನ ಆಚರಿಸಿಕೊಂಡರು. ಆದರೆ ಈ ವರ್ಷದ ಹುಟ್ಟುಹಬ್ಬ ನಟನ ಕಣ್ಣಲ್ಲಿ ನೀರು ತರಿಸಿತ್ತು. ಮೆಚ್ಚಿನ ನಟನ ಜನ್ಮದಿನಾಚರಣೆ ಸಲುವಾಗಿ ಗದಗ ಜಿಲ್ಲೆಯಲ್ಲಿ ಕಟೌಟ್ ಕಟ್ಟುತ್ತಿದ್ದ ಯುವಕರಿಗೆ ವಿದ್ಯುತ್ ತಗುಲಿತ್ತು. ಪರಿಣಾಮ ಮೂವರು ಕೊನೆಯುಸಿರೆಳೆದಿದ್ದರು, ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ, ನಾಳೆ ಯಶ್ ಕಡೆಯವರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಪರಿಹಾರದ ಚೆಕ್ ವಿತರಿಸುವ ಸಾಧ್ಯತೆ ಇದೆ.
ಮೃತರ ಕುಟುಂಬ ಭೇಟಿ ಮಾಡಲಿರುವ ಯಶ್ ಆಪ್ತರು: ನಾಳೆ ಬೆಳಗ್ಗೆ ಸುಮಾರು 10 ಗಂಟೆಗೆ ಸೂರಣಗಿ ಗ್ರಾಮಕ್ಕೆ ಭೇಟಿ ಯಶ್ ಆಪ್ತರು ಭೇಟಿ ನೀಡಲಿದ್ದಾರೆ. ರಾಕೇಶ್, ಚೇತನ್ ಹಾಗೂ ಗದಗ ಜಿಲ್ಲೆಯ ಯಶ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ ಅವರು ಭೇಟಿ ನೀಡಿ ತಮ್ಮವರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳುವ ಕೆಲಸ ಮಾಡಲಿದ್ದಾರೆ. ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ಘಟನೆಯಿದು. ಜನವರಿ 8 ನಟ ಯಶ್ ಅವರ ಜನ್ಮದಿನ. ಈ ಹಿನ್ನೆಲೆ ಹಿಂದಿನ ದಿನ ಅಭಿಮಾನಿಗಳ ತಯಾರಿ ನಡೆಯುತ್ತಿತ್ತು. ತಮ್ಮದೇ ಆದ ರೀತಿಯಲ್ಲಿ ಮೆಚ್ಚಿನ ನಟನ ಜನ್ಮದಿನ ಆಚರಿಸಲು ಯಶ್ ಅಭಿಮಾನಿಗಳು ನಿರ್ಧರಿಸಿದ್ದರು. ಸೆಲೆಬ್ರೇಶನ್ಗಾಗಿ ಕಟೌಟ್ ನಿಲ್ಲಿಸುವಾಗ ನಡೆದ ವಿದ್ಯುತ್ ಅವಘಡದಲ್ಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡದ 'ಬೆಸ್ಟ್ ಗೆಸ್ಟ್ ಮೊಮೆಂಟ್ಸ್' ಇವು..
ಘಟನೆ ನಡೆದ ಮರುದಿನವೇ ಅಂದರೆ ತಮ್ಮ ಜನ್ಮದಿನದಂದು ನಟ ಯಶ್ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮೃತ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಗೋವಾದಲ್ಲಿದ್ದ ಯಶ್ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ನಂತರ ರಸ್ತೆ ಮಾರ್ಗದ ಮೂಲಕ ಗದಗ ತಲುಪಿದ್ದರು.