ಗದಗ : ಮಹದಾಯಿ ಕುರಿತು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು ಹರ್ಷ ತಂದಿದೆ ಎಂದು ಶಾಸಕ ಎಚ್.ಕೆ ಪಾಟೀಲ್ ಹೇಳಿದರು.
ಈ ಕುರಿತು ನಗರದ ಪತ್ರಿಕಾಭವನದಲ್ಲಿ ಮಾತನಾಡಿ, ಮಹದಾಯಿ ವಿಚಾರದಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಶ್ರಮವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಇದು ಇಲ್ಲಿಗೆ ಮುಗಿದಿಲ್ಲ, ಈಗ ಆರಂಭವಾಗಿದೆ. ಕಳಸ-ಬಂಡೂರಿಗೆ ಕೇಂದ್ರ ಅರಣ್ಯ ಇಲಾಖೆ ಭೂಮಿ ನೀಡಲು ಒಪ್ಪಿದ್ದು, ಆದೇಶವೊಂದೇ ಬಾಕಿಯಿದೆ. ಮುಂಬರುವ ಬಜೆಟ್ ನಲ್ಲಿ 2 ಸಾವಿರ ಕೋಟಿ ಮೀಸಲಿಡೋ ಮೂಲಕ ರಾಜ್ಯ ಸರ್ಕಾರ ತನ್ನ ಆಸಕ್ತಿ ತೋರಿಸಬೇಕು. ಕಾಮಗಾರಿಗೆ ಸಮಯ ನಿಗದಿ ಮಾಡಿ ಅದನ್ನು ಬಜೆಟ್ನಲ್ಲಿ ಘೋಷಣೆ ಮಾಡಬೇಕು. ನಾವು ಮೈ ಮರೆತು ಕೂರುವಂತಿಲ್ಲ. ಈಗಾಗಲೇ ಗೋವಾ ಸಿಎಂ ಸಾವಂತ್ ಸುಪ್ರೀಂ ಆದೇಶಕ್ಕೆ ತಡೆ ತರ್ತೀನಿ ಅಂತ ತಯಾರಾಗಿದ್ದಾರೆ. ಹೀಗಾಗಿ ಸರ್ಕಾರ ಮೈ ಮರೆತು ಕೂರುವಂತಿಲ್ಲ ಎಂದು ಹೇಳಿದರು.
ಇದೇ ವೇಳೆ ತಮ್ಮ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರೋ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ವೀಕ್ನೆಸ್ ಗೊತ್ತಿದ್ರೆ ಅದನ್ನು ಹೇಳೋದು ಬಿಡೋದು ಅವರಿಗೆ ಬಿಟ್ಟಿದ್ದು. ಆದರೆ, ಅದನ್ನು ರಾಜಕಾರಣದಲ್ಲಿ ಇಟ್ಕೊಳ್ಳಬಾರದು. ಈ ಬಗ್ಗೆ ಹೆಚ್ಚಿಗೆ ಮಾತನಾಡುವ ಅವಶ್ಯಕತೆಯಿಲ್ಲ ಎಂದು ಟಾಂಗ್ ನೀಡಿದರು.
ದೆಹಲಿ ಘಟನೆಗಳಿಗೆ ಕಾಂಗ್ರೆಸ್ ಕಾರಣ ಎಂದಿರುವ ನಳೀನ್ ಕುಮಾರ್ ಕಟೀಲ್ ಆರೋಪ ತಿರುಗೇಟು ನೀಡಿ, ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲವೂ ಇದೆ. ಗೋಲಿ ಮಾರೋ ಸಾಲೋಂ ಕೋ ಅಂತ ಹೇಳಿದ್ದು ಯಾರು ಅನ್ನೋದು ಗೊತ್ತಿದೆ. ಅವರ ಮೇಲೆ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ರು. ಈಗಾಗಲೇ ದೆಹಲಿ ಘಟನೆ 38 ಜನ ಅಮಾಯಕರ ಜೀವ ಬಲಿ ಪಡೆದಿದೆ. ಶಾಂತಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ತೆಗೆದುಕೊಂಡು ಹೋಗಿದ್ದು ದುರ್ದೈವದ ಸಂಗತಿ. ಇದು ಮೋದಿ ಹಾಗೂ ಅಮಿತ್ ಶಾ ಮೇಲೆ ಬಂದ ಕಳಂಕ ಎಂದು ವಾಗ್ದಾಳಿ ನಡೆಸಿದರು.