ಗದಗ: ನಾನು ನನ್ನ ಕುಟುಂಬದಿಂದ ಯಾರನ್ನೂ ರಾಜಕೀಯಕ್ಕೆ ಕರೆ ತರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತೇನೆ. ಅದರಂತೆಯೇ ಕುಮಾರಸ್ವಾಮಿ ಅವರು ಹೇಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಯಾರ ಗುಂಡಿ ಯಾರು ತೋಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಅಂತ ಬಂದಾಗ ಕುಮಾರಸ್ವಾಮಿ, ದೇವೇಗೌಡ್ರು, ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್, ನಿಖಿಲ್, ಭವಾನಿ ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಇವರಷ್ಟೇ ಒಂದು ಪಕ್ಷನಾ? ಎಂದು ಪ್ರಶ್ನಿಸಿದರು.
ನಾನು ರಾಜಕೀಯಕ್ಕೆ ಬಂದು 25 ವರ್ಷವಾಯಿತು. ಇಲ್ಲಿಯವರೆಗೆ ಮೋದಿ ಅವರ ಆದರ್ಶ ಪಾಲನೆ ಮಾಡುತ್ತಾ ಬಂದಿರುವೆ. ನಾನು ನನ್ನ ಕುಟುಂಬದಿಂದ ಯಾರನ್ನೂ ರಾಜಕೀಯಕ್ಕೆ ಕರೆ ತರುವುದಿಲ್ಲ. ನನ್ನ ಹಾಗೆಯೇ ನೀವು ಹೇಳುತ್ತೀರಾ?. ರಾಜಕೀಯದಲ್ಲಿ ಹೆಚ್ಚು ಹಣ ಗಳಿಸಬಹುದೆಂಬ ಕಾರಣಕ್ಕಾಗಿ ನೀವು ನಿಮ್ಮ ಕುಟುಂಬದವರನ್ನು ರಾಜಕೀಯಕ್ಕೆ ತರುತ್ತಿದ್ದೀರಿ. ಈ ಮೂಲಕ ದುಡ್ಡು ಗಳಿಸುತ್ತಿದ್ದೀರಿ ಎಂದು ಅವರ ಆರೋಪಕ್ಕೆ ಪ್ರತ್ಯಾರೋಪ ಮಾಡಿದರು
ಇದನ್ನೂ ಓದಿ: ರಾಜಕೀಯ ಕೇವಲ ಲಾಭಕಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ: ಸಚಿವ ಅಶ್ವಥ್ ನಾರಾಯಣ್
ಡ್ರಾಮಾ ಬಾಜಿ ಕಂಪನಿ: ಸಿದ್ದರಾಮಯ್ಯ ಅವರದ್ದು ಒಂದು ಡ್ರಾಮಾ ಬಾಜಿ ಕಂಪನಿ. ಅವರಿಗೆ ಎಲ್ಲಿ ನಿಂತರೂ ಗೆಲ್ಲುತ್ತೇನೆ ಎಂಬ ಧೈರ್ಯ ಇಲ್ಲ. ಜನರ ಜೊತೆಗೆ ಸರಿಯಾಗಿ ಸಂಪರ್ಕ ಇಟ್ಟುಕೊಂಡಿಲ್ಲ. ಒಂದು ವೇಳೆ, ಇಟ್ಟುಕೊಂಡಿದ್ದರೆ ಚಾಮುಂಡೇಶ್ವರಿಯಲ್ಲಿ ಅವರು ಸೋಲುತ್ತಿರಲಿಲ್ಲ. ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಅವರು ಸೋಲುತ್ತಾರೆ ಎಂದರೆ ಯಾವ ಕೆಲಸವನ್ನೂ ಮಾಡಲಿಲ್ಲ ಎಂದರ್ಥ. ಅವರ ಬಗ್ಗೆ ಜನರಿಗೂ ಒಳ್ಳೆಯ ಅಭಿಪ್ರಾಯವಿಲ್ಲ ಎಂದರು.
ಕಳಸಾ - ಬಂಡೂರಿ ಯೋಜನೆಯು ಬಿಜೆಪಿಯ ಚುನಾವಣಾ ಗಿಮಿಕ್ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಗಿಮಿಕ್ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ. 75 ವರ್ಷದ ಇತಿಹಾಸದಲ್ಲಿ ಸುಮಾರು 50 ಕ್ಕಿಂತ ಹೆಚ್ಚು ವರ್ಷ ನಮ್ಮ ದೇಶದಲ್ಲಿ ಕಾಂಗ್ರೆಸ್ ಆಡಳಿತವೇ ಇತ್ತು. ಸೋನಿಯಾ ಗಾಂಧಿ ಅವರೇ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷ ಯಾವತ್ತೂ ಕರ್ನಾಟಕದ ಪರವಾಗಿಲ್ಲ. ಕೇವಲ ರಾಜಕಾರಣ ಮಾಡಿಯೇ ಅಧಿಕಾರಕ್ಕೆ ಬರಬೇಕು ಅಂತಿದೆಯೇ ಹೊರತಾಗಿ ಜನರ ಕಲ್ಯಾಣ ಬಯಸಿ ಅಲ್ಲ. ಅವರಿಗೆ ಜನರ ಬಗ್ಗೆ ಕಳಕಳಿ ಇಲ್ಲ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ವೀಕೆಸ್ಟ್ ಮುಖ್ಯಮಂತ್ರಿ: ಸಿದ್ದರಾಮಯ್ಯ