ಗದಗ : ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂಬ ಚರ್ಚೆಗಳು ಶುರುವಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಕೆಲ ಶಾಸಕರು ಹೇಳಿಕೆ ನೀಡಿದ್ದರು. ಗದಗ ಜಿಲ್ಲೆಯ ರೈತರು ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಎತ್ತಿನ ಮೇಲೆ ಬರೆಸಿ ಕಾರು ಹುಣ್ಣಿಮೆ ಆಚರಿಸಿದ್ದಾರೆ.
ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಅದ್ಧೂರಿಯಾಗಿ ಕಾರ ಹುಣ್ಣಿಮೆ ಆಚರಣೆ ಮಾಡಲಾಗಿದೆ. ಗ್ರಾಮದ ಪ್ರಮುಖ ಬೀದಿಯಲ್ಲಿ ರಸ್ತೆಯ ಎರಡೂ ಬದಿಗೆ ಎರಡು ಕಂಬಗಳನ್ನು ಹಾಕಿ ಅಡ್ಡಲಾಗಿ ಬೇವಿನ ಮರದ ಎಲೆಗಳನ್ನು ಕಟ್ಟಲಾಗುತ್ತೆ. ಗ್ರಾಮದ ಎಲ್ಲಾ ರೈತರು ತಮ್ಮ ಎತ್ತುಗಳನ್ನು ತಂದು ಕರಿ ಹರಿಯುತ್ತಾರೆ.
ಈ ವೇಳೆ ಯಾವ ಎತ್ತು ಮೊದಲು ಮುಟ್ಟುತ್ತದೆ ಅದರ ಬಣ್ಣದ ಮೇಲೆ ಬೆಳೆಯ ಬಗ್ಗೆ ಊಹೆ ಮಾಡಿಕೊಳ್ತಾರೆ. ಬಿಳಿ ಬಣ್ಣದ ಎತ್ತು ಕರಿ ಹರಿದರೆ, ಇಲ್ಲ ಕಂದು ಬಣ್ಣದ ಎತ್ತು ಕರಿ ಹರಿದರೆ ಹೀಗೆ ಎತ್ತುಗಳ ಬಣ್ಣದ ಮೇಲೆ ಮುಂದೆ ಬರುವ ಬೆಳೆಗಳು ಫಸಲು ಚೆನ್ನಾಗಿ ಕೊಡುತ್ತೋ ಇಲ್ವೋ ಅಂತ ಲೆಕ್ಕಾಚಾರ ಹಾಕ್ತಾರೆ.
ಇಲ್ಲಿನ ಎಲ್ಲಾ ಗ್ರಾಮಸ್ಥರು ಸೇರಿ ಎತ್ತಿಗೆ ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಬರೆದು ವಿನೂತನವಾಗಿ ಹಬ್ಬ ಆಚರಣೆ ಮಾಡಿದ್ದಾರೆ. ಮುಂದಿನ ಸಿಎಂ ಸಿದ್ದರಾಮಯ್ಯ ಆಗಲಿ ಅಂತ ದೇವರಲ್ಲಿ ಬೇಡಿಕೊಂಡಿದ್ದಾರೆ. ಈಗಾಗಲೇ ಶಾಸಕರಿಂದ ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡದಂತೆ ಹೈಕಮಾಂಡ್ ಸಿದ್ದರಾಮಯ್ಯಗೆ ತಾಕೀತು ಮಾಡಿ ಬಾಯಿ ಮುಚ್ಚಿಸಿದ್ದಾರೆ. ಈಗ ಜನರು ಮುಂದಿನ ಸಿಎಂ ಸಿದ್ದರಾಮಯ್ಯ ಅಂತಿದ್ದಾರೆ.