ಗದಗ: ನಮ್ಮ ಪಕ್ಷದಲ್ಲಿ ವರಿಷ್ಠರ ತೀರ್ಮಾನದಂತೆ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ, ಇದು ನಮ್ಮ ಪಕ್ಷದ ಸಿದ್ಧಾಂತ ಎಂದು ಮಾಜಿ ಸಚಿವ ಶಾಸಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ತಾಲೂಕಿನ ಹುಲಕೋಟಿ ಕನ್ನಡ ಗಂಡು ಮಕ್ಕಳ ಶಾಲೆ ಬೂತ್ ನಂಬರ್ 65 ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರು ಸಿಎಂ ಯಾರ ಆಗಬೇಕೆಂಬ ಚರ್ಚೆಯಲ್ಲಿ ಜಿದ್ದಿಗೆ ಬಿದ್ದಿರುವ ಹಿನ್ನೆಲೆ ಈ ಹೇಳಿಕೆ ನೀಡಿದರು. ಇನ್ನು ನಾಲ್ಕು ಚುನಾವಣಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡಿದ್ದೇನೆ, ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಅವರು ಈ ಹಿಂದೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿ ಜಯಚಂದ್ರ ಅವರ ಆಯ್ಕೆ ಬಹಳ ಸುಲಭ ಇದೆ. ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್ ಎಂ ಕುಬೇರಪ್ಪ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.