ಗದಗ: ಕರ್ತವ್ಯಕ್ಕೆ ಹೋಗುವ ಸಂದರ್ಭದಲ್ಲಿ ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ ಬಿಎಸ್ಎಫ್ ಯೋಧ ಕುಮಾರಸ್ವಾಮಿ ನಾಗರಾಳ ಪಾರ್ಥಿವ ಶರೀರವನ್ನು ಇಂದು ಮಿಲಿಟರಿ ವಾಹನದಲ್ಲಿ ಹುಟ್ಟೂರು ಗದಗದ ವಿವೇಕಾನಂದ ನಗರಕ್ಕೆ ತರಲಾಯಿತು. ಈ ವೇಳೆ ಹೆತ್ತವರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.
36 ವರ್ಷದ ಕುಮಾರಸ್ವಾಮಿ 16 ವರ್ಷಗಳಿಂದ 'ಕೋಲ್ಕತ್ತಾ 17ನೇ ಬೆಟಾಲಿಯನ್ ಟಾಗೋರ್ ಬಿಲ್ಲಾ'ದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜುಲೈ 15ರಂದು ಕುಮಾರಸ್ವಾಮಿ ಕರ್ತವ್ಯಕ್ಕೆ ಹೋಗುವ ಸಂದರ್ಭದಲ್ಲಿ ಜಾರಿ ಬಿದಿದ್ದರು. ಈ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಕೋಲ್ಕತ್ತಾದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 18ರಂದು ಬಾರದ ಲೋಕಕ್ಕೆ ಪಯಣ ಬೆಳೆಸಿದರು.
ವೀರ ಪುತ್ರನ ಕಳೆಬರಹ ನೋಡುತ್ತಿದ್ದಂತೆ ತಾಯಿ, ಪತ್ನಿಯ ಕಣ್ಣೀರಿನ ಕಟ್ಟೆ ಒಡೆದು ಹೋಯಿತು. ಕುಮಾರಸ್ವಾಮಿ ಅವರನ್ನು ದೇಶ ಸೇವೆಗೆ ಕಳಿಸಿದ್ದೇ ತಾಯಿ ಲಕ್ಷ್ಮಿ. ತಾಯಿಗಾಗಿ ಸೇವೆಯನ್ನೂ ತೊರೆಯಲು ಮುಂದಾಗಿದ್ದಂತೆ. ಆದರೆ, ತಾಯಿ ಯಾವುದೇ ಕಾರಣಕ್ಕೂ ಬಿಟ್ಟು ಬರದಂತೆ ತಿಳಿಸಿದ್ದರಂತೆ. ಶ್ರಾವಣ ಮುಗಿದ ಬಳಿಕ ತನ್ನ ತಾಯಿಯನ್ನು ಕೋಲ್ಕತ್ತಾಗೆ ಬರುವಂತೆ ಹೇಳಿದ್ದನಂತೆ. ಆದರೀಗ ಪುತ್ರನ ಕಳೆದುಕೊಂಡ ತಾಯಿಯ ರೋಧನ ಎಲ್ಲರ ಮನಕಲುಕುವಂತೆ ಮಾಡಿದೆ.
ಸಾಯಿ ಮಂದಿರ ಬಳಿ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಸ್ಪಿ ಶ್ರೀನಾಥ್ ಜೋಶಿ, ಡಿವೈಎಸ್ಪಿ ವಿಜಯಕುಮಾರ್ ಅವರು ಹೂಗುಚ್ಚ ಅರ್ಪಿಸಿ ಗೌರವ ಸಲ್ಲಿಸಿದರು.
ಯೋಧ ಕುಮಾರಸ್ವಾಮಿ ಮರಣ ಹೊಂದಿದ ಸುದ್ದಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಬ್ಬುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು. ವಿವಿಧ ಶಾಲಾ ವಿದ್ಯಾರ್ಥಿಗಳು ಕೂಡ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ವಿವೇಕಾನಂದ ನಗರದಿಂದ ಯೋಧನ ಪಾರ್ಥೀವ ಶರೀರದ ಬೃಹತ್ ಮೆರವಣಿಗೆ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಯೋಧನಿಗೆ ಮುದ್ರಣ ಕಾಶಿಯ ಜನರು ಕಣ್ಣೀರಿನ ವಿದಾಯ ಹೇಳಿದರು.