ಗದಗ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ತಾಲೂಕು ಪಂಚಾಯತಿ ಸದಸ್ಯ ತನ್ನ ಸಂಗಡಿಗರೊಂದಿಗೆ ಹಲ್ಲೆ ಮಾಡಿ, ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿರುವ ಆರೋಪ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗದಗ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಜೂನ್ 1ರಂದು ಈ ಘಟನೆ ನಡೆದಿದ್ದು, ಗ್ರಾಮದ ಗೋಪಾಲ್ ರೆಡ್ಡಿ ಎಂಬುವರ ಮೇಲೆ ಹಲ್ಲೆ ಮಾಡಿ, ವಿಷ ಕುಡಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಅದೇ ಗ್ರಾಮದ, ಗದಗ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೃಷ್ಣಗೌಡ ಪಾಟೀಲ್ ಎನ್ನುವರು ಸಂಗಡಿಗರೊಂದಿಗೆ ಹಲ್ಲೆ ಮಾಡಿ ನನಗೆ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾರೆಂದು ಹಲ್ಲೆಗೊಳಗಾದ ಗೋಪಾಲರೆಡ್ಡಿ ದೂರು ದಾಖಲಿಸಿದ್ದಾರೆ. ಹರ್ಲಾಪುರ ಗ್ರಾಮದಲ್ಲಿಯೇ ಪಂಕ್ಚರ್ ಅಂಗಡಿ ನಡೆಸುತ್ತಿರುವ ಗೋಪಾಲ ರೆಡ್ಡಿ, ತಮ್ಮ ಅಂಗಡಿ ಇರುವ ಸರ್ಕಾರಿ ಜಾಗೆಯ ವಿಚಾರವಾಗಿ ಈ ಘಟನೆ ನಡೆದಿದೆ ಎನ್ನುತ್ತಿದ್ದಾರೆ.
ಚಿಕಿತ್ಸೆ ಪಡೆಯುವ ವೇಳೆ ಆಸ್ಪತ್ರೆಯಲ್ಲಿಯೂ ಸಹ ಪೊಲೀಸರ ಮೂಲಕ ರಾಜಿಗೆ ಯತ್ನಿಸಿದ್ದಾರೆ. ಅಲ್ಲದೇ ಪೊಲೀಸರು ತಮಗೆ ಇಷ್ಟವಿಲ್ಲದಿದ್ರೂ ಸಹಿ ಪಡೆದಿದ್ದಾರೆ ಎಂದು ಗೋಪಾಲ್ ರೆಡ್ಡಿ ಅವರ ಪತ್ನಿ ಗೀತಾ ಆರೋಪಿಸಿದ್ದಾರೆ.
ಈ ಕುರಿತು ತಾಲೂಕು ಪಂಚಾಯತಿ ಸದಸ್ಯ ಕೃಷ್ಣಗೌಡ ಪಾಟೀಲ್ ಅವರನ್ನು ಸಂಪರ್ಕಿಸಿದಾಗ, ಈ ಜಗಳಕ್ಕೂ ನನಗೂ ಸಂಬಂಧವಿಲ್ಲ. ಬೇರೆಯವರೊಂದಿಗೆ ನಡೀತಿದ್ದ ವಾಗ್ವಾದ ಬಿಡಿಸಲಷ್ಟೇ ನಾನು ಹೋಗಿದ್ದು ಎನ್ನುತ್ತಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.