ಗದಗ: ಕೊರೊನಾ ವಾರಿಯರ್ಸ್‌ಗೆ ಉಚಿತ ಮಾಸ್ಕ್ ವಿತರಿಸಲು ಎಂದು ತಮ್ಮ ಶಾಲಾ ಸರಸ್ವತಿ ಪೂಜೆಗೆಂದು ಕೂಡಿಸಿದ್ದ ದೇಣಿಗೆ ಹಣವನ್ನು ವಿದ್ಯಾರ್ಥಿಗಳು ಬಳಸಿಕೊಂಡು ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ.
ತೋಂಟದಾರ್ಯ ಮಠದ ಶಾಲಾ ಮಕ್ಕಳು ಸರಸ್ವತಿ ಪೂಜೆಗೆಂದು ದೇಣಿಗೆ ಹಣವನ್ನು ಕೂಡಿಸಿದ್ದರು. ಕೊರೊನಾ ಎಫೆಕ್ಟ್ನಿಂದ ಲಾಕ್ಡೌನ್ ಜಾರಿಯಾದ ಹಿನ್ನೆಲೆ ಸರಸ್ವತಿ ಪೂಜೆ ಮಾಡಲಾಗಲಿಲ್ಲ. ಹಾಗಾಗಿ ಹಣ ಬೇರೆ ಕೆಲಸಕ್ಕೆ ಬಳಸಬಾರದು ಅನ್ನುವ ಉದ್ದೇಶದಿಂದ ವಿದ್ಯಾರ್ಥಿಗಳು ಕೊರೊನಾ ವಾರಿಯರ್ಸ್‌ಗೆ ಮಾಸ್ಕ್ ತಯಾರಿಸಲು ಆ ದುಡ್ಡನ್ನು ಬಳಸುತ್ತಿದ್ದಾರೆ.
ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು, ಮಾಧ್ಯಮದವರಿಗೆ ಮತ್ತು ಕುಟುಂಬದ ಸದಸ್ಯರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಬೇಕು ಎನ್ನುವ ದೃಷ್ಟಿಯಿಂದ ಹಣ ವಿನಿಯೋಗ ಮಾಡಿ ಬಟ್ಟೆ ಖರೀದಿಸಿ ತಂದುಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಮಾಸ್ಕ್ ತಯಾರಿಗೆ ಮಹಿಳೆಯರು ಕೂಡಾ ಸಾಥ್ ನೀಡುತ್ತಿದ್ದಾರೆ. ತಾಲೂಕಿನ ಅಡವಿ ಸೋಮಾಪೂರ ಗ್ರಾಮದ ಟ್ರೈಲರಿಂಗ್ ಸ್ಕೂಲ್ ಮಹಿಳೆಯರು ಉಚಿತವಾಗಿ ಮಾಸ್ಕ್ ಹೊಲಿದು ಕೊಡುವ ಮೂಲಕ ವಿದ್ಯಾರ್ಥಿಗಳ ಒಳ್ಳೆಯ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
ದಿನಕ್ಕೆ 50 ರಿಂದ 60ಕ್ಕೂ ಹೆಚ್ಚು ಮಹಿಳೆಯರು ಮಾಸ್ಕ್ ತಯಾರಿಸುತ್ತಿದ್ದಾರೆ. ಸದ್ಯ ಏಳು ನೂರಕ್ಕೂ ಹೆಚ್ಚು ಮಾಸ್ಕ್ ತಯಾರಾಗಿವೆ. ಸರಸ್ವತಿ ಪೂಜೆಗೆಂದು 15 ಸಾವಿರ ರೂ. ದೇಣಿಗೆ ಹಣ ಕೊಟ್ಟು ಮಾನವೀಯತೆ ಮೆರೆದ ತೋಂಟದಾರ್ಯ ಮಠದ ಶಾಲೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.