ಗದಗ: ಕೇಂದ್ರ ಚುನಾವಣಾ ಆಯೋಗದ ಮಾನದಂಡಗಳ ಪ್ರಕಾರ ಸರ್ಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಬೇಕು. ಆದರೆ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ರಾಜೀನಾಮೆ ಸಲ್ಲಿಸಿದ್ದರೂ ಅಂಗೀಕಾರವಾಗಿಲ್ಲ. ಹೀಗಾಗಿ ಈಗಲೂ ಅವರು ಸರ್ಕಾರಿ ನೌಕರ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಡಾ. ಚಂದ್ರು ಲಮಾಣಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ತಮ್ಮ ಮೇಲಿನ ಆರೋಪದಿಂದ ನುಣುಚಿಕೊಳ್ಳಲು ರಾಜೀನಾಮೆ ನೀಡಿದ್ದಾರೆ. ಆದರೆ ಅದು ಕೂಡ ಅಂಗೀಕಾರವಾಗಿಲ್ಲ ಎಂದು ಪತ್ರದಲ್ಲಿ ಜಿಲ್ಲಾಧಿಕಾರಿಗಳು ಉಲ್ಲೇಖಿಸಿದ್ದಾರೆ.
ಚಂದ್ರು ಲಮಾಣಿ ಅವರು 2021, ಜುಲೈ 31 ರಂದು ರಾಜೀನಾಮೆ ನೀಡಿದ್ದು, ಇದುವರೆಗೆ ಅಗೀಕಾರವಾಗಿಲ್ಲ. ಅವರು ಈವರೆಗೂ ಸರ್ಕಾರಿ ನೌಕರರೇ ಆಗಿದ್ದಾರೆ. ರಾಜಕೀಯ ಪ್ರಭಾವ ಬೆಳೆಸಿ ಬಿಜೆಪಿ ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮ 2021 ಉಪ ನಿಯಮ 3ರ ಸಾಮಾನ್ಯ ತತ್ವಗಳು (1) (2) (3) ಮತ್ತು ಉಪ ನಿಯಮ 5 ಅನ್ನು ಉಲ್ಲಂಘಿಸುರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾತ್ರವಲ್ಲದೆ, ಚುನಾವಣಾ ನೀತಿ ಸಂಹಿತೆ ಆದೇಶವನ್ನು ಪಾಲಿಸದೇ ನಿಯಮಗಳನ್ನು ಉಲ್ಲಂಘಿಸಿದ ಅಪರಾಧದ ಹಿನ್ನೆಲೆ ಚಂದ್ರು ಲಮಾಣಿ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಶಿರಹಟ್ಟಿ ಸಾರ್ವಜನಿಕ ಆಸ್ಪತ್ರೆ ವೈದ್ಯ ಚಂದ್ರು ಲಮಾಣಿ ಅವರು ಸರ್ಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಟಿಕೆಟ್ ಕೊಡುವಂತೆ ಹಾಲಿ ಶಾಸಕ ಪಟ್ಟು: ಶಿರಹಟ್ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ಡಾ. ಚಂದ್ರು ಲಮಾಣಿ ಬಿ ಫಾರಂ ನೀಡಲು ಕಾನೂನು ತೊಡಕು ಎದುರಾಗಿದೆ. ಸರ್ಕಾರಿ ವೈದ್ಯ ಆಗಿರುವ ಡಾ.ಚಂದ್ರು ಲಮಾಣಿ ಮೇಲೆ 2019 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಲೋಕಾಯುಕ್ತ ದಾಳಿ ಆಗಿತ್ತು. ಇಲಾಖಾ ಹಂತದಲ್ಲಿ ಚಂದ್ರು ವಿರುದ್ಧ ತನಿಖೆ ಬಾಕಿ ಇದೆ ಎಂದು ಕ್ಷೇತ್ರದ ಶಾಸಕ ರಾಮಪ್ಪ ಲಮಾಣಿ ಆರೋಪಿಸಿದ್ದರು. ಅಲ್ಲದೆ, ತಾಂತ್ರಿಕ ಕಾರಣದಿಂದ ಅವರ ಇನ್ನೂ ರಾಜೀನಾಮೆ ಅಂಗೀಕಾರ ಆಗಿಲ್ಲ. ಈ ಕಾರಣಕ್ಕೆ ಡಾ. ಚಂದ್ರು ಲಮಾಣಿಗೆ ಬಿ ಫಾರಂ ನೀಡಲು ಸಾಧ್ಯವಾಗುತ್ತಿಲ್ಲ. ಇತ್ತ ಶಿರಹಟ್ಟಿ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ವಿರುದ್ಧ ಹಾಲಿ ಶಾಸಕ ರಾಮಪ್ಪ ಲಮಾಣಿ ದೂರು ನೀಡಿದ್ದಾರೆ. ಚಂದ್ರು ಲಮಾಣಿ ವಿರುದ್ಧ ಸಾಕಷ್ಟು ಆರೋಪಗಳಿವೆ. ಅವರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಈ ಹಿನ್ನೆಲೆ ತಮಗೆ ಟಿಕೆಟ್ ಕೊಡುವಂತೆ ಶಾಸಕ ರಾಮಪ್ಪ ಲಮಾಣಿ ಆಗ್ರಹಿಸಿದ್ದಾರೆ. ಈ ಸಂಬಂಧ ಇತ್ತೀಚೆಗೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ದೂರು ಕೊಟ್ಟಿದ್ದರು.
ಇದನ್ನೂ ಓದಿ: ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ ಬಿ ಫಾರಂ ನೀಡಲು ಕಾನೂನು ತೊಡಕು: ತನಗೇ ಟಿಕೆಟ್ ಕೊಡುವಂತೆ ಹಾಲಿ ಶಾಸಕ ಪಟ್ಟು