ಗದಗ: ಯೋಧ ನಮ್ಮ ದೇಶ ಕಾಪಾಡೋ ರಕ್ಷಕ. ಆದರೆ ಇಲ್ಲಿ ಯೋಧನ ಕುಟುಂಬಕ್ಕೇ ರಕ್ಷಣೆ ಇಲ್ಲದಂತಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ಗದಗ ಜಿಲ್ಲೆಯ ಹೊಳೆಆಲೂರು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ಯೋಧನ ಕುಟುಂಬ ಸದ್ಯ ಅತಂತ್ರವಾಗಿದೆ. ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಳವಾದ ಪರಿಣಾಮ ಜಿಲ್ಲೆಯ ಹೊಳೆಆಲೂರು ಗ್ರಾಮ ಮುಳುಗಿದೆ. ಹೀಗಾಗಿ ಯೋಧನ ಕುಟುಂಬ ತಮ್ಮ ಮನೆ ತೊರೆದು ಆಶ್ರಯ ಯೋಜನೆ ಮನೆಯೊಂದರಲ್ಲಿ ಆಶ್ರಯ ಪಡೆದಿದೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ಮನೆ ಖಾಲಿ ಮಾಡುವಂತೆ ಯೋಧನ ಕುಟುಂಬಕ್ಕೆ ಮೂಲ ಮನೆ ಮಾಲೀಕರು ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮನೆಯ ಯಜಮಾನ ಯೋಧ ಈರಪ್ಪ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ 20 ದಿನಗಳಿಂದ ಈ ಕುಟುಂಬಕ್ಕೆ ಯೋಧನ ಸಂಪರ್ಕ ಸಾಧ್ಯವಾಗಿಲ್ಲ. ಇತ್ತ ಕುಟುಂಬ ಜಲಪ್ರಳಯಕ್ಕೆ ತುತ್ತಾಗಿದೆ ಅಂತಾ ಯೋಧನಿಗೆ ಸಣ್ಣ ಸುಳಿವೂ ಸಹ ಇಲ್ಲ. ಆದರೆ ಬಾಣಂತಿ ಮಗಳು, ಇಬ್ಬರು ಗಂಡು ಮಕ್ಕಳ ಜೊತೆ ಯೋಧನ ಪತ್ನಿ ಜಯಲಕ್ಷ್ಮಿ ಈ ಪ್ರವಾಹದ ಸಮಸ್ಯೆಗೆ ಸಿಲುಕಿ ಪರದಾಡುತ್ತಿದ್ದಾರೆ.
ರಕ್ಷಣೆಗೆ ಕ್ರಮ:
ಕೊನೆಗೂ ಸುದ್ದಿ ತಿಳಿದು ಹೊಳೆಆಲೂರು ಗ್ರಾಮಕ್ಕೆ ನೋಡಲ್ ಅಧಿಕಾರಿ ರುದ್ರೇಶ್ ತೆರಳಿ ಯೋಧನ ಕುಟುಂಬಕ್ಕೆ ಅಭಯ ನೀಡಿದ್ದಾರೆ. ಓಡೋಡಿ ಬಂದ ಅಧಿಕಾರಿಗಳು ಯೋಧನ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದ್ದು, ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ.
ಅಲ್ಲದೆ ಮನೆಯ ಮೂಲ ಮಾಲೀಕರಿಗೆ ರುದ್ರೇಶ್ ತರಾಟೆ ತೆಗೆದುಕೊಂಡರು. ಯೋಧನ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಪಿಎಸ್ಐಗೆ ಸೂಚನೆ ನೀಡಿದ್ದಾರೆ.