ಗದಗ: ಜಿಲ್ಲೆಯ ರೈತನ ಬದುಕು ಮೊನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಅಂದಪ್ಪ ಬೆಲ್ಲದ ಎಂಬ ರೈತ ಸಾಲ ಸೂಲ ಮಾಡಿ 6 ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದರು. ಮೊನ್ನೆ ಸುರಿದ ಭಾರಿ ಮಳೆಗೆ ಬಾಳೆ ಗಿಡಗಳೆಲ್ಲಾ ನೆಲಕ್ಕುರುಳಿ ಸಂಪೂರ್ಣ ಬೆಳೆ ಕೊಳೆಯುವ ಸ್ಥಿತಿ ಎದುರಾಗಿದೆ. ಪ್ರತಿ ಎಕರೆಗೆ 3 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ 6 ಎಕರೆ ಜಾಗದಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದರು.
ಅಕಾಲಿಕ ಮಳೆಯಿಂದಾಗಿ ಬೆಳೆದ ಸಂಪೂರ್ಣ ಬೆಳೆ ನೆಲಕಚ್ಚಿದೆ. ಅಲ್ಪಸ್ವಲ್ಪ ಉಳಿದ ಬಾಳೆ ರಫ್ತಿಗೆ ಅವಕಾಶ ನೀಡಿ ಎಂದು ರೈತ ಅಂದಪ್ಪ ಕಣ್ಣೀರಿಡುತ್ತಿದ್ದಾರೆ.
ಹೀಗಾಗಿ ಮುಂಡರಗಿಯ ಹಾಗೂ ಸುತ್ತಮುತ್ತಲಿನ ರೈತರು ರಾಜ್ಯ ಸರ್ಕಾರಕ್ಕೆ ಬೆಳೆದಿರುವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.