ಗದಗ: 17 ವರ್ಷಗಳ ಕಾಲ ದೇಶ ಸೇವೆ ಮಾಡಿ ಸದ್ಯ ನಿವೃತ್ತಿ ಹೊಂದಿರುವ ಯೋಧನೊಬ್ಬ ಪುಡಿ ರೌಡಿಗಳ ದೌರ್ಜನ್ಯದಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇನೆಗೆ ಸೇರಬೇಕು ಎಂಬ ಹಂಬಲವಿರುವ ಬಡಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಕಟ್ಟಡ ಕಟ್ಟಲು ಸ್ಥಳೀಯ ಅಧಿಕಾರಿಗಳು ಹಾಗೂ ಪುಡಿ ರೌಡಿಗಳ ದೌರ್ಜನ್ಯಕ್ಕೆ ಬೇಸತ್ತಿದ್ದಾರೆ. ಸ್ಥಳೀಯ ಪುಂಡರ ಜೀವ ಬೆದರಿಕೆಗೆ ಬೇಸತ್ತು ಕುಟುಂಬದ 8 ಮಂದಿ ಇದೀಗ ರಾಷ್ಟ್ರಪತಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸ್ವಾವಲಂಬಿ, ಸ್ವಾತಂತ್ರ್ಯ ಹಾಗೂ ಸಮಾಜಮುಖಿಯಾಗಿ ಬದುಕುವುದು ಪ್ರತಿಯೊಬ್ಬರ ಹಕ್ಕಾಗಿದೆ. ಆದರೆ ಪುಂಡ-ಪೋಕರಿಗಳು ಹಾಗೂ ಕೆಲ ಅಧಿಕಾರಿಗಳ ಕಿರುಕುಳದಿಂದ ಗದಗ ಜಿಲ್ಲೆಯ ಈ ಯೋಧನ ಕುಟುಂಬ ನೊಂದು ಬೆಂದಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸುರ ಗ್ರಾಮದ ಈ ಮಾಜಿ ಸೈನಿಕ ಈರಣ್ಣ ಅಣ್ಣಿಗೇರಿ ಕುಟುಂಬ ಸದ್ಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಾಸವಿದೆ. ಈ ಮಾಜಿ ಸೈನಿಕನ ಕುಟುಂಬದ 8 ಜನರು ರಾಷ್ಟ್ರಪತಿಗೆ ದಯಾ ಮರಣಕ್ಕೆ ಅಜ್ಜಿ ಸಲ್ಲಿಸಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದ ಈಶ್ವರ ನಗರದಲ್ಲಿ ಪ್ಲಾಟ್ ನಂಬರ್ 127/197ಅನ್ನು ಸುಮಾರು 8 ವರ್ಷಗಳ ಹಿಂದೆಯೇ ಖರೀದಿಸಿದ್ದಾರೆ. ಈ ಜಾಗದಲ್ಲಿ ಮನೆ ಹಾಗೂ ಸೈನ್ಯಕ್ಕೆ ಸೇರಬೆಕೇಂಬ ಬಡಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿದ್ದಾರೆ. ಆದ್ರೆ ಸ್ಥಳೀಯ ಗಂದಾಧರ ಗುಡಗೇರಿ ಹಾಗೂ ಮಂಜುನಾಥ ಮಾಗಡಿ ಎಂಬುವರು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂಬುದು ಮಾಜಿ ಸೈನಿಕನ ಕುಟುಂಬದ ಆರೋಪವಾಗಿದೆ.
ಯಾವುದೇ ಹುರುಳಿಲ್ಲದೆ ಕಟ್ಟಡ ಕಟ್ಟಲು ಅನುಮತಿ ನೀಡದೆ, ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಹಾಗಾಗಿ ಹಂತಕರ ಕೈಯಲ್ಲಿ ಸಾವನ್ನಪ್ಪುವುದಕ್ಕಿಂತ ಸರ್ಕಾರದ ಎದುರು ಸಾವಿಗೆ ಶರಣಾಗುವುದೇ ಒಳ್ಳೆಯದು ಎಂದು ನೊಂದು ದಯಾಮರಣಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಮಾಜಿ ಸೈನಿಕ ಈರಣ್ಣ ಅಣ್ಣಿಗೇರಿ.
ಇವರು 17 ವರ್ಷ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ನಾಗಾಲ್ಯಾಂಡ್, ವೆಲ್ಲಿಂಗ್ಟನ್, ಸಿಯಾಚಿನ್ನಲ್ಲಿ ಸೇವೆ ಸಲ್ಲಿಸಿದ್ದಾರೆ. ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಹೊಂದಿದ್ದಾರೆ. ದಯಾ ಮರಣಕ್ಕೆ ಮಾಜಿ ಸೈನಿಕ ಈರಣ್ಣ (38), ಪತ್ನಿ ಕವಿತಾ (32), ಮಕ್ಕಳಾದ ಪ್ರಕೃತಿ(3) ಹಾಗೂ 5 ತಿಂಗಳ ಪ್ರಣಿತ್ ಜೊತೆಗೆ ಮಾಜಿ ಸೈನಿಕನ ಸಹೋದರ ಶಿವಲಿಂಗಪ್ಪ, ಅವರ ಪತ್ನಿ ಶೋಭಾ (34), ಮಕ್ಕಳಾದ ಶಿವಯೋಗಿ (13), ಆದಿತ್ಯ (11) ಹೀಗೆ ಒಟ್ಟು 8 ಜನ ದಯಾಮರಣ ಅರ್ಜಿನಲ್ಲಿ ಹೆಸರು ನೋಂದಾಯಿಸಿದ್ದಾರೆ.
ಮಂಜುನಾಥ ಹಾಗೂ ಶಿಕ್ಷಕ ಗಂಗಾಧರ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಈರಣ್ಣ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ನ್ಯಾಯ ಸಿಗುತ್ತಿಲ್ಲ ಎಂದಿದ್ದಾರೆ. ಹಾಗಾಗಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಸರ್ವೋಚ್ಛ ನ್ಯಾಯಾಧೀಶರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರಂತೆ. ಕಿರುಕುಳ ನೀಡುತ್ತಿರುವವರಿಗೆ ಕೂಡಲೇ ಶಿಕ್ಷೆಯಾಗಬೇಕು. ಇಲ್ಲವಾದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.