ಗದಗ: ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಹಾಗೂ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ತಿರಂಗಾ ಯಾತ್ರೆಯನ್ನು ನಡೆಸಿದರೆ, ರೋಣದಲ್ಲಿ ವಿರೋಧಿ ಸಮಾವೇಶ ನಡೆಯಿತು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ತಿರಂಗಾ ಯಾತ್ರೆ ನಡೆಸಲಾಯಿತು. ಲಕ್ಷ್ಮೇಶ್ವರ ಪಟ್ಟಣದ ಬೀದಿಗಳಲ್ಲಿ ಈ ಯಾತ್ರೆಯನ್ನು ನಡೆಸಿದ ವಿದ್ಯಾರ್ಥಿಗಳು, ಪೌರತ್ವ ಕಾಯ್ದೆಯನ್ನು ಬೆಂಬಲಿಸುವಂತೆ ಜನತೆಗೆ ಕರೆ ನೀಡಿದರು. ಜೊತೆಗೆ ಪೌರತ್ವ ಕಾಯ್ದೆ ಕುರಿತು ಜನ ಜಾಗೃತಿ ಮೂಡಿಸಲಾಯಿತು.
ಪೌರತ್ವ ಕಾಯ್ದೆ ವಿರೋಧಿಸಿ ಬೃಹತ್ ಸಮಾವೇಶ:
ಮತ್ತೊಂದೆಡೆ ಪೌರತ್ವ ಕಾಯ್ದೆ ವಿರೋಧಿಸಿ ರೋಣ ಪಟ್ಟಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಪಟ್ಟಣದ ಹೊಸ ಸಂತೆ ಬಜಾರ್ನಲ್ಲಿ ಅಂಜುಮನ್ ಎ ಇಸ್ಲಾಂ ಕಮಿಟಿ ಹಾಗೂ ದಲಿತ ಸಂಘರ್ಷ ಸಮಿತಿಯಿಂದ ಸಮಾವೇಶ ನಡೆಸಲಾಯಿತು. ಈ ಸಮಾವೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು.