ಗದಗ: ವೀರಶೈವ ಲಿಂಗಾಯತ ಮೀಸಲಾತಿ ವಿಚಾರವಾಗಿ ಗದಗದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯವರ ಮೇಲೆ ಹರಿಹಾಯ್ದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರಟ್ಟಿಯವರೇ ವೀರಶೈವ ಹಾಗೂ ಲಿಂಗಾಯತ ಎರಡು ಸಮುದಾಯ ಒಂದೇ. ವೀರಶೈವ ಲಿಂಗಾಯತ ಮೀಸಲಾತಿ ಕುರಿತು ಸರ್ಕಾರ ಚಿಂತನೆ ಮಾಡುತ್ತೆ. ನೀವೇಕೆ ಮಾಡ್ತೀರಾ ಎಂದು ಪ್ರಶ್ನಿಸಿದರು. ಅಲ್ಲದೆ, ಈ ಸಂಬಂಧ ಹೊರಟ್ಟಿಯವರು ಬರೆದಿರೋ ಪತ್ರ ತಲುಪಿದ ನಂತರ ಪರಿಶೀಲನೆ ಮಾಡುತ್ತೇವೆ ಎಂದರು.
ಇನ್ನು, ಪೌರತ್ವ ಕಾಯ್ದೆಗೆ 1955 ರಿಂದ ಈವರೆಗೆ 8 ಬಾರಿ ತಿದ್ದುಪಡಿಯಾಗಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಸೇರಿದಂತೆ ಅನೇಕ ದೇಶಗಳಿಂದ ನಮ್ಮ ದೇಶಕ್ಕೆ ಸಂತ್ರಸ್ತರು ಬರುತ್ತಿದ್ದಾರೆ. ಅಲ್ಲಿನ ಅಲ್ಪಸಂಖ್ಯಾತರಿಗೆ 2014ರ ಪೂರ್ವದಲ್ಲಿ ಇರುವವರಿಗೆ ಪೌರತ್ವ ನೀಡಲಾಗುತ್ತೆ. ಕಾಂಗ್ರೆಸ್ ನವರು ತಪ್ಪು ಕಲ್ಪನೆ ಮೂಡಿಸಿ, ಜನರನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ನವರೇ ಈ ರೀತಿಯ ಹೋರಾಟ ಮಾಡಿಸುತ್ತಿದ್ದಾರೆ. ಅದಕ್ಕಾಗಿಯೇ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕಿನಲ್ಲಿ ಜನ ಜಾಗೃತಿ ಮಾಡುತ್ತಿದ್ದೇವೆ ಎಂದು ಸವದಿ ಆರೋಪಿಸಿದರು.
ಮಾಜಿ ಸಚಿವ ಹೆಚ್ ಕೆ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಸವದಿ, ಹೆಚ್ ಕೆ ಪಾಟೀಲ್ ಪೌರತ್ವ ಕಾಯ್ದೆಯ ಕುರಿತು ತಿಳಿದುಕೊಂಡು ಮಾತನಾಡಲಿ. ಅವರು ಹಿರಿಯ ರಾಜಕಾರಣಿ. ಅವರ ಪಕ್ಷದ ನಾಯಕರು ಪಾರ್ಲಿಮೆಂಟ್ ನಲ್ಲಿ ಕಾಯ್ದೆ ಕುರಿತು ಏನು ಮಾತನಾಡಿದ್ದಾರೆ ಎನ್ನುವುದನ್ನು ಕೇಳಲಿ ಎಂದು ಒತ್ತಾಯಿಸಿದರು.
ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟದ್ದು. ಒಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಬಹುದು. ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವ ಪರಮಾಧಿಕಾರ ಇರೋದು ಸಿಎಂ ಅವರಿಗೆ. ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.