ಗದಗ : ಚುನಾವಣೆ ಅಂದರೆ ಸೋಲು ಗೆಲುವು ಎಷ್ಟು ಮುಖ್ಯವೋ ಅಭ್ಯರ್ಥಿಗಳಿಗೆ ಪಕ್ಷದಿಂದ ಟಿಕೆಟ್ ಸಿಗೋದು ಸಹ ಅಷ್ಟೇ ಮುಖ್ಯ. ಆದರೆ, ಟಿಕೇಟ್ ಸಿಗಲಿಲ್ಲ ಅಂತ ಅಭ್ಯರ್ಥಿಯೊಬ್ಬರು ಬೆಸರಗೊಂಡು ಸುಡುವ ಬಿಸಿಲಿನಲ್ಲಿ ಬಾರಿಗಾಲಿನಲ್ಲಿ ನಿಂತು ಪ್ರಚಾರ ಆರಂಭಿಸಿದ್ದಾರೆ.
ಗದಗದ ಮುಂಡರಗಿ ಪಟ್ಟಣದ ಜ್ಯೋತಿ ನಾಗರಾಜ ಹಾನಗಲ್ಲ ಎಂಬುವರು ಈ ರೀತಿ ವಿಭಿನ್ನವಾಗಿ ಪ್ರಚಾರಕ್ಕೆ ಧುಮುಕಿದ್ದಾರೆ. ಸ್ಥಳಿಯ ಸಂಸ್ಥೆಯಾದ ಪುರಸಭೆ ಚುನಾವಣೆಗೆ ಬಿ ಫಾರಂ ನೀಡಿಲ್ಲ ಅಂತ ಪಕ್ಷದ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದಾರೆ. ಹೀಗಾಗಿ ಸ್ಥಳೀಯ ಮುಖಂಡರ ವಿರುದ್ಧ ತಮ್ಮ ಆಕ್ರೋಶ ಹೊರಹಾಕ್ತಿದ್ದಾರೆ.
ಮುಂಡರಗಿ ಪುರಸಭೆ 15 ನೇ ವಾರ್ಡಿನಿಂದ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿ ಜ್ಯೋತಿ ಅವರು ನಾಮಪತ್ರ ಸಲ್ಲಿಸಿದ್ರು. ಕೊನೆ ಗಳಿಗೆಯಲ್ಲಿ ಬೇರೊಬ್ಬರಿಗೆ ಪಕ್ಷದ ಬಿ ಫಾರಂ ಸಿಕ್ಕಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಲು ನಿರ್ಧರಿಸಿದ್ದಾರೆ. ಹದಿನೈದು ವರ್ಷದಿಂದ ಪಕ್ಷದಲ್ಲಿ ಕಾರ್ಯಕರ್ತೆಯಾಗಿ ದುಡಿದಿದ್ರೂ ನನಗೆ ಟಿಕೆಟ್ ವಂಚನೆಯಾಗಿದೆ. ಹೀಗಾಗಿ ಚುನಾವಣೆಯಲ್ಲಿ ನಾನು ಗೆಲ್ಲಲಿ ಅಥವಾ ಸೋಲಲಿ ಚುನಾವಣೆ ಮುಗಿಯೋವರೆಗೂ ಚಪ್ಪಲಿ ಹಾಕಿಕೊಳ್ಳದೆ ಬರಿಗಾಲಲ್ಲಿಯೇ ಓಡಾಡುತ್ತೇನೆ. ಬರಿಗಾಲಲ್ಲಿಯೇ ವಾರ್ಡಿನ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತೇನೆ ಅಂತಾ ಶಪಥ ತೊಟ್ಟಿದ್ದಾರೆ.
ಬಿಜೆಪಿ ಪಕ್ಷದ ಬಿ ಫಾರಂಗಾಗಿ ರಾಜ್ಯದ ಮಾಜಿ ಸಿಎಂ ಅವರಿಂದ ಹಿಡಿದು ಶಾಸಕರು ಸಂಸದರು ಸೇರಿದಂತೆ ಇತರ ಮುಖಂಡರಿಂದಲೂ ಶಿಫಾರಸ್ಸು ಮಾಡಿಸಿದ್ದರಂತೆ. ಆದರೆ ಸ್ಥಳೀಯ ಮುಖಂಡರ ನಿರ್ಧಾರದಿಂದ ಜ್ಯೋತಿ ಅವರಿಗೆ ಬಿ ಫಾರ್ಮ ಸಿಕ್ಕಿಲ್ಲ. ಕಣದಿಂದ ಹಿಂದೆ ಸರಿಯಲು ಪಕ್ಷದ ಮುಖಂಡರು ಎಷ್ಟೇ ಮನವೊಲಿಸಿದರು ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ. ಹೀಗಾಗಿ ಟಿಕೆಟ್ ವಂಚಿತ ಈ ಅಭ್ಯರ್ಥಿ ಪಕ್ಷ ಬಿಡದೆ ಪಕ್ಷೇತರರಾಗಿ ಕಣದಲ್ಲಿ ಉಳಿದುಕೊಂಡಿದ್ದು, ಬರಿಗಾಲಲ್ಲಿಯೇ ಕ್ಯಾಂಪೇನ್ ಮುಂದುವರಿಸಿದ್ದಾರೆ. ಇವರ ಬರಿಗಾಲ ಪ್ರಚಾರಕ್ಕೆ ಇವರ ಕುಟುಂಬದ ಸದಸ್ಯರೂ ಸೇರಿದಂತೆ ಇವರ ಪತಿಯೂ ಸಹ ಸಾಥ್ ನೀಡಿದ್ದಾರೆ.