ಗದಗ: ಅಕ್ರಮ ಮರಳು ದಂಧೆಕೋರರು ಹೆಣ ಹೂಳುವ ಜಾಗವನ್ನು ಬಿಡುತ್ತಿಲ್ಲ. ಮನೆಗಳ ನಿರ್ಮಾಣಕ್ಕೆ ಅಸ್ತಿಪಂಜರ ಸಮೇತ ಮರಳು ಸಾಗಾಟ ಮಾಡುತ್ತಿದ್ದಾರೆ! ಈ ಅಕ್ರಮ ಚಟುವಟಿಕೆ ಬಗ್ಗೆ ಮಾತನಾಡಲು ಗ್ರಾಮದ ಜನ್ರು ಕೂಡಾ ಭಯ ಪಡ್ತಿದ್ದಾರೆ.
ಲಕ್ಷ್ಮೇಶ್ವರ ತಾಲೂಕು ಪುಟ್ಟಗಾಂವ್ ಬಡ್ನಿ ಗ್ರಾಮದ ಪಕ್ಕದಲ್ಲಿಯೇ ಇರುವ ಸ್ಮಶಾನದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಭೂಮಿ ಅಗೆದು ಅಸ್ತಿಪಂಜರಗಳನ್ನು ಬಿಸಾಡಿ ಮರಳುಗಾರಿಕೆ ಮಾಡುತ್ತಿದ್ದಾರೆ. ರುದ್ರಭೂಮಿ ಪಕ್ಕದಲ್ಲಿಯೇ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿ ನೀರಿನ ಜೊತೆ ಬರುವ ಮರಳನ್ನು ಅಕ್ರಮವಾಗಿ ದೋಚುತ್ತಾ, ಸ್ಮಶಾನ ಪ್ರದೇಶದಲ್ಲಿಯೂ ಮರಳುಗಾರಿಕೆ ಮಾಡುತ್ತಿದ್ದಾರೆ.
ಎರಡು ವರ್ಷದ ಹಿಂದೆ ಅಕ್ರಮ ಮರಳು ಮಾಫಿಯಾ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮಟ್ಟಿಗೆ ಹೋಗಿತ್ತು. ಘಟನೆಯಲ್ಲಿ ಇಡೀ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಆದ್ರೂ ಕೂಡ ಈ ದಂಧೆಗೆ ಬ್ರೇಕ್ ಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಲು ಗ್ರಾಮಸ್ಥರು ಕೂಡ ಹಿಂದೇಟು ಹಾಕುತ್ತಿದ್ದಾರೆ.
ಸಾವು ಕಂಡ ದೇಹಗಳಿಗೆ ಸ್ಮಶಾನವೇ ದಿಕ್ಕು. ಸತ್ತ ಮೇಲೆ ಮನುಷ್ಯನಿಗೆ ನೆಮ್ಮದಿ ಸಿಗೋದು ಸ್ಮಶಾನದಲ್ಲಿ ಅಂತಾರೆ. ಆದ್ರೆ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಸ್ಮಶಾನದಲ್ಲೂ ನೆಮ್ಮದಿ ಇಲ್ಲದಂತಾಗಿದ್ದು ವಿಪರ್ಯಾಸ. ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಎಚ್ಚೆತ್ತು ಕೊಂಡು ಅಕ್ರಮ ಮರಳು ದಂಧೆ ಕಡಿವಾಣ ಹಾಕಬೇಕಿರುವುದು ಅತ್ಯಂತ ತುರ್ತಾಗಿ ಆಗಬೇಕಿರವ ಕೆಲಸ.