ಗದಗ : ರಾಜ್ಯ ಸರ್ಕಾರದ ನೂತನ ಭೂ ಸುಧಾರಣಾ ಕಾಯ್ದೆಗೆ ಕಾಂಗ್ರೆಸ್‌ನ ಮಾಜಿ ಸಚಿವ ಹೆಚ್ ಕೆ ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರ ರೈತ ವಿರೋಧಿ ನಿರ್ಣಯ ಕೈಗೊಂಡಿದೆ. ಶ್ರೀಮಂತರು ಹಾಗೂ ಕಂಪನಿಯವರಿಗೆ ಭೂಮಿ ಪಡೆಯಲು ಆದ್ಯತೆ ನೀಡುವ ಮೂಲಕ ಊಳುವವನ ಊರುಗೋಲು ಕಿತ್ತು ಉಳ್ಳವನಿಗೆ ನೀಡುವ ಕೃತ್ಯವಾಗಿದೆ ಎಂದು ಹರಿಹಾಯ್ದರು.
ಇದು ಕಪ್ಪುಹಣ ಆಸ್ತಿ ರೂಪದಲ್ಲಿ ಪರಿವರ್ತನೆ ಮಾಡುವುದಕ್ಕೆ ಅನುಕೂಲವಾಗುವ ರೀತಿ ಕರಾಳ ನಿರ್ಣಯವಾಗಿದೆ. ಈ ರಾಜ್ಯದಲ್ಲಿ ಕ್ರಾಂತಿಕಾರಿಕ ಕಾನೂನು ಮಾಡಲಾಗಿದೆ. ಸಮಾಜವಾದಿ ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಹಣವಂತರಿಗೆ ಮಣೆ ಹಾಕುವ ಕೆಲಸ ಸರ್ಕಾರ ಮಾಡಿದೆ. ಗ್ರಾಮಗಳ ಆರ್ಥಿಕತೆ ಬುಡಮೇಲು ಮಾಡಿದೆ ಎಂದು ಆರೋಪಿಸಿದರು.
ಸ್ಥಳೀಯ ಚುನಾವಣೆ ಕುರಿತು ಮಾತನಾಡಿ, ಚುನಾವಣೆಗಳನ್ನು ಮುಂದೂಡಬಾರದು. ರಾಜ್ಯಸಭಾ, ಎಂಎಲ್‌ಸಿ ಚುನಾವಣೆಗಳಿಗೆ ತೊಂದರೆಯಿಲ್ಲ. ಆದರೆ, ಪಂಚಾಯತ್, ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದ ಚುನಾವಣೆ ನಡೆಸಲು ಸರ್ಕಾರಕ್ಕೆ ತೊಂದರೆನಾ?. ಸಾಮಾಜಿಕ ಅಂತರ ಕಾಯ್ದುಕೊಂಡು ಚುನಾವಣೆ ನಡೆಸೋಕೆ ಅವಕಾಶವಿದೆ. ಚುನಾವಣೆಗಳನ್ನು 6 ತಿಂಗಳವರೆಗೆ ಯಾಕೆ ಮುಂದೂಡ್ತೀರಿ?. ಮದ್ಯದ ಅಂಗಡಿ ಓಪನ್ ಮಾಡಿದ್ರಿ, ಸಂತೆ ಮಾಡಿದ್ರಿ, ಮಂತ್ರಿಗಳು ಜೆಸಿಬಿ ಕಡೆಯಿಂದ ಮಾಲೆ ಹಾಕಿಸಿಕೊಳ್ತೀರಿ.
ಚುನಾವಣೆಗೆ ಏಕೆ ಮುಂದೂಡಿಕೆ ಎಂದು ಮಾಜಿ ಸಚಿವರು ಪ್ರಶ್ನೆ ಮಾಡಿದ್ರು. ಲಾಕ್‌ಡೌನ್ ಇದ್ದಾಗ ಬಿಟ್ಟಿದ್ರೆ ಅರ್ಥ ಇತ್ತು, ಸಡಿಲಿಕೆ ಮಾಡಿದಾಗ ಮುಂದಾಕೋದು ಸರಿಯಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ ಎಸ್ ಪಾಟೀಲ್, ಎಮ್‌ಎಲ್‌ಸಿ ಶ್ರೀನಿವಾಸ ಮಾನೆ, ಎ ಎಂ ಹಿಂಡಸಗೇರಿ ಸೇರಿ ಅನೇಕರು ಉಪಸ್ಥಿತರಿದ್ದರು.