ಗದಗ: ಪ್ರತಿ ಚುನಾವಣೆ ಎದುರಾದಾಗ ಗಿಮಿಕ್ ಮಾಡುವ ಮೂಲಕ ಹೆಚ್ ಕೆ ಪಾಟೀಲ್ ಸ್ಟಂಟ್ ಮಾಸ್ಟರ್ ಆಗ್ತಾರೆ ಅಂತಾ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ ಕೆ ಪಾಟೀಲರ ಗಿಮಿಕ್ಗೆ ಮತದಾರರು ಬೇಸರಗೊಂಡಿದ್ದಾರೆ. ಮತಪ್ರಭು ಪ್ರತಿ ಬಾರಿ ಮೋಸ ಹೋಗುವುದಿಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ನೇರವಾಗಿ ಬಿಜೆಪಿ ಪರ ನಿಂತುಕೊಂಡಿದ್ದಾರೆ. ಹಲವಾರು ಅಲ್ಪಸಂಖ್ಯಾತರು ಪಿಎಂ ನರೇಂದ್ರ ಮೋದಿ ಅವರ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಪರಿಕಲ್ಪನೆ ತಿಳಿದುಕೊಂಡು ಬಿಜೆಪಿ ಬೆಂಬಲಿಸುತ್ತಿದ್ದಾರೆ ಅಂದರು.
ಜಿಲ್ಲೆಯಲ್ಲೆ ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಮರಳು ದಂಧೆ ನಿಲ್ಲಿಸಲು ಪಾಟೀಲ್ರಿಗೆ ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದಲ್ಲಿ ಕುಡಿಯಲು ತುಂಗಭದ್ರಾ ಏತನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಸಾಕಷ್ಟು ಮನವಿ ಮಾಡಿದ್ದೆವು. ಅದೂ ಕೂಡಾ ನೆರವೇರಿಲ್ಲ. ಇದೇ ವೇಳೆ ಮಾತನಾಡಿದ ಅವರು, ಈ ಬಾರಿ ನಗರಸಭೆ 35 ವಾರ್ಡ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ನಗರಸಭೆ ಮುಂಬರುವ ಚುನಾವಣೆಯನ್ನು ಮಿಷನ್ 31 ಗುರಿ ಇಟ್ಟುಕೊಂಡು ಸಿದ್ಧತೆ ನಡೆಸಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.