ಗದಗ: ಮುದ್ರಣ ಕಾಶಿ ಗದಗದ ವೈದ್ಯಕೀಯ ವಿಜ್ಞಾನ ಸಂಸ್ಥೆ(ಜಿಮ್ಸ್) ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಅಮೋಘ ಸಾಧನೆ ಮೂಲಕ ಕರ್ನಾಟಕಕ್ಕೆ ಮೊದಲ ಶ್ರೇಣಿ ಪಡೆದಿದ್ದಾರೆ.
122 ವಿದ್ಯಾರ್ಥಿಗಳ ಪೈಕಿ 121 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಶೇ. 100ಕ್ಕೆ, 99.17 ಫಲಿತಾಂಶ ಬಂದಿದ್ದು, ಇದು ಇಡೀ ಕರ್ನಾಟಕ ಮೆಡಿಕಲ್ ಇತಿಹಾಸದಲ್ಲಿ ಅತಿ ಹೆಚ್ಚು ಫಲಿತಾಂಶ ಬಂದಿರುವ ದಾಖಲೆಯನ್ನು ಗದಗ ವೈದ್ಯಕೀಯ ಕಾಲೇಜು ಮಾಡಿದೆ. ಅದರಲ್ಲೂ ಈ ವೈದ್ಯಕೀಯ ಕಾಲೇಜು 2015ರಲ್ಲಿ ಆರಂಭವಾಗಿದ್ದು, ಮೊದಲ ಬ್ಯಾಚ್ನ ವಿದ್ಯಾರ್ಥಿಗಳೇ ಈ ಸಾಧನೆ ಮಾಡಿರುವುದು ವಿಶೇಷ.
ನೀಟ್ ಪರೀಕ್ಷೆಯ ಮೆರಿಟ್ ಅಧಾರದ ಮೇಲೆ ಗದಗ ವೈದ್ಯಕೀಯ ಕಾಲೇಜು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ಹೊಸ ಕಾಲೇಜೆಂದು ಮೊದಲು ತಳಮಳಗೊಂಡಿದ್ದರು. ಅದರಲ್ಲೂ ಹಿಂದುಳಿದ ಪ್ರದೇಶದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಷ್ಟೊಂದು ಮೂಲ ಸೌಕರ್ಯ ಇಲ್ಲದಿದರೂ ವೈದ್ಯಕೀಯ ಇತಿಹಾಸದಲ್ಲಿ ನೂತನ ದಾಖಲೆ ಮಾಡಿರುವುದು ವಿಶಿಷ್ಟ ಸಾಧನೆಯಾಗಿದೆ.