ಗದಗ: ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ರೈತರಿಗೆ ಜಿಲ್ಲೆಯ ಜನರ ಪ್ರಯಾಣಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಗರದ ಹಳೆಯ ಬಸ್ ನಿಲ್ದಾಣವನ್ನು ಹೊಸದಾಗಿ ನವೀಕರಣ ಮಾಡಲಾಗಿದೆ. ಆದರೆ ಆ ಬಸ್ ನಿಲ್ದಾಣ ರಾಜಕೀಯ ಕೆಸರೆರಚಾಟದ ಕಾರಣದಿಂದ ಉದ್ಘಾಟನಾ ಭಾಗ್ಯದಿಂದ ವಂಚಿತವಾಗಿದೆ.
ಸಚಿವ ಸಿ.ಸಿ.ಪಾಟೀಲ್ ಮತ್ತು ಮಾಜಿ ಸಚಿವ, ಗದಗ ಮತ ಕ್ಷೇತ್ರದ ಶಾಸಕ ಹೆಚ್.ಕೆ.ಪಾಟೀಲ್ ನಡುವಿನ ರಾಜಕೀಯ ಬೇಗುದಿಯೇ ಇದಕ್ಕೆ ಮುಖ್ಯ ಕಾರಣವಾಗಿದ್ದು, ಬಸ್ ನಿಲ್ದಾಣ ಉದ್ಘಾಟನೆಯಾಗದ್ದಕ್ಕೆ ಇದೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದಾಗಿ ಸಾರ್ವಜನಿಕರಲ್ಲೂ ಆಕ್ರೋಶ ವ್ಯಕ್ತವಾಗಿದೆ.
ಸುಮಾರು ಮೂರು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದ ಬಸ್ ನಿಲ್ದಾಣದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಹೆಚ್.ಕೆ.ಪಾಟೀಲ್ ಈ ಯೋಜನೆಗೆ ಮಂಜೂರು ಮಾಡಿದ್ದರು. ಈಗ ಮೂರು ವರ್ಷ ಕಳೆದು ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರಕಾರ ಅಧಿಕಾರದಲ್ಲಿ ಇದೆ. ಆದ್ರೂ ಸಹ ಈ ಹೊಸ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.
ಇದು ಕಾಂಗ್ರೆಸ್ ಅವಧಿಯಲ್ಲಿನ ಯೋಜನೆಯಾಗಿದ್ದರಿಂದ ಒಂದು ವೇಳೆ ಈ ಕಟ್ಟಡ ಉದ್ಘಾಟನೆಗೊಂಡು ಜನರಿಗೆ ಅನುಕೂಲವಾದರೆ, ಅದು ಕಾಂಗ್ರೆಸ್ಗೆ ಕ್ರೆಡಿಟ್ ಹೋಗುತ್ತದೆ ಎಂದು ಸಿ.ಸಿ.ಪಾಟೀಲ್ ಭಾವಿಸಿರುವ ಸಾಧ್ಯತೆ ಇದೆ. ಇದರ ಜೊತೆಗೆ ಹೆಚ್.ಕೆ.ಪಾಟೀಲ್ ಸಹ ನಮ್ಮ ಸರ್ಕಾರ ಯೋಜನೆಯನ್ನು ಬಿಜೆಪಿ ಸರ್ಕಾರಕ್ಕೆ ಯಾಕೆ ಕ್ರೆಡಿಟ್ ಕೊಡಬೇಕು ಎಂದು ಭಾವಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಗರದ ಹೃದಯ ಭಾಗದಲ್ಲಿ ಈ ಬಸ್ ನಿಲ್ದಾಣ ಇರುವ ಕಾರಣದಿಂದ ಮಾರ್ಕೆಟ್ಗೆ, ಶಾಲಾ, ಕಾಲೇಜುಗಳಿಗೆ ಹಾಗೂ ನೌಕರರಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಬೇಗ ಉದ್ಘಾಟನೆ ಮಾಡಿ ಬಸ್ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.