ಗದಗ: ಸಾಮಾನ್ಯವಾಗಿ ಶಾಲೆಯ ಭದ್ರತೆಗಾಗಿ ಕಂಪೌಂಡ್ ಮತ್ತು ಗೇಟ್ ನಿರ್ಮಾಣ ಮಾಡಿರುತ್ತಾರೆ. ಆದರೆ ವಿಚಿತ್ರ ಏನಪ್ಪ ಅಂದ್ರೆ ಇಲ್ಲೊಂದು ಶಾಲೆಯ ಸುತ್ತಾ ಹಾಕಿರುವ ಮುಳ್ಳಿನ ಬೇಲಿ ಮೈದಾನದಲ್ಲಿ ಬೆಳೆದಿರೋ ಬೆಳೆಯನ್ನ ಕಾಯುತ್ತಿದೆ.
ಮಲಪ್ರಭಾ ನದಿ ಪ್ರವಾಹದಿಂದ ನೀರಿನಲ್ಲಿ ಮುಳುಗಿದ್ದ ಗದಗ ಜಿಲ್ಲೆಯ ಕುರುವಿನಕೊಪ್ಪ ಗ್ರಾಮಸ್ಥರನ್ನು ಸದ್ಯ ನವಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ. 42 ಕುಟುಂಬಗಳು ವಾಸವಾಗಿರೋ ಈ ನವಗ್ರಾಮದಲ್ಲಿ ಮಕ್ಕಳ ವಿದ್ಯಾಭ್ಯಾಸ, ಆಟ-ಪಾಠ, ಪ್ರವಚನಕ್ಕಾಗಿ ಅಂತಾ ಶಾಲೆ ಹಾಗೂ ಶಾಲಾ ಮೈದಾನ ನಿರ್ಮಾಣ ಮಾಡಲಾಗಿತ್ತು. 2009 ರಲ್ಲಿಯೇ ನವಗ್ರಾಮ ನಿರ್ಮಾಣವಾದರೂ ಇಲ್ಲಿಯ ತನಕ ಯಾರೊಬ್ಬರೂ ಸಹ ಇಲ್ಲಿಗೆ ಎಂಟ್ರಿ ಕೊಟ್ಟಿದ್ದಿಲ್ಲ. ಹಾಗಾಗಿ ಶಾಲಾ ಆವರಣ ಸಂಪೂರ್ಣ ಮುಳ್ಳು ಕಂಟಿಗಳಿಂದ ತುಂಬಿ ಹೋಗಿತ್ತು.
ಆದರೆ, ಈ ಬಾರಿ ಪ್ರವಾಹಕ್ಕೆ ಇಡೀ ಗ್ರಾಮವೇ ನೀರು ಪಾಲಾಗಿದ್ದರಿಂದ ಗ್ರಾಮಸ್ಥರೆಲ್ಲರೂ ನವಗ್ರಾಮಕ್ಕೆ ಶಿಫ್ಟ್ ಆಗಿದ್ದಾರೆ. ಅದೇ ರೀತಿ ಶಾಲೆಯೂ ಕೂಡ ಶಿಫ್ಟ್ ಆಗಿದೆ. ಇದೀಗ ಗ್ರಾಮಸ್ಥರೊಬ್ಬರು ಬಂದ್ ಆಗಿರುವ ಶಾಲೆಯ ಮೈದಾನ ಸ್ವಚ್ಛಗೊಳಿಸಿಕೊಂಡು, ಅಲ್ಲಿಯೇ ಬಿತ್ತನೆ ಮಾಡಿದ್ದಾರೆ. ಬೆಳೆ ಹಾಳಾಗಬಾರದು, ಜಾನುವಾರು ಒಳ ನುಸುಳಬಾರದು ಎಂದು ಮೈದಾನದ ಸುತ್ತಲೂ ಮುಳ್ಳುಕಂಟಿ ಹಾಕಿದ್ದಾರೆ. ಇದರಿಂದ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಬೇಲಿ ಹಾರಿ ಶಾಲೆ ಒಳಗೆ ಬರುವ ಸ್ಥಿತಿ ಎದುರಾಗಿದೆ. ಅಲ್ಲದೇ ಮಕ್ಕಳು ಸಹ ಮೈದಾನ ಇಲ್ಲದೇ ಶಾಲಾ ಕೊಠಡಿಯನ್ನೇ ಮೈದಾನ ಮಾಡಿಕೊಂಡಿದ್ದಾರೆ.
ಒಟ್ಟಾರೆ ಶಾಲೆ ಒಳಗೆ ಹೊಲಾನೋ ಅಥವಾ ಹೊಲದಲ್ಲಿ ಶಾಲೆಯೋ ಅಂತಾ ತಿಳಿದಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಸಮಸ್ಯೆ ಬಗೆಹರಿಸಿ ಮಕ್ಕಳಿಗೆ ಅನುವು ಮಾಡಿಕೊಡಬೇಕಾಗಿದೆ.