ಗದಗ : ನೂರಾರು ಜನರ ಮನೆಗೆ ಕಣ್ಣ ಹಾಕಿ ಜೈಲು ಕಂಬಿ ಎಣಿಸಿದ್ದ ಶಿಗ್ಲಿ ಬಸ್ಯಾನ ಹೆಂಡತಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾಳೆ.
ನ್ಯಾಯಾಧೀಶರ ಮನೆ ಸೇರಿ ರಾಜ್ಯಾದ್ಯಂತ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿ, ಕೋರ್ಟ್ನಲ್ಲಿ ತನ್ನ ಪರವಾಗಿ ತಾನೇ ವಾದ ಮಂಡಿಸಿ ಗಮನ ಸೆಳೆದಿದ್ದ ಶಿಗ್ಲಿ ಬಸ್ಯಾ ಅಲಿಯಾಸ ಬಸವರಾಜ್ ಗಡ್ಡಿ ಪತ್ನಿ ಗುಲ್ಜಾರಾಬಾನು ಶೇಖ್ ಕೇವಲ 2 ಮತಗಳ ಅಂತರದಿಂದ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ಗ್ರಾಪಂ ಮತ ಎಣಿಕೆ: ಸಮಬಲ ಹಿನ್ನೆಲೆ ಲಾಟರಿ ಮೂಲಕ ಆಯ್ಕೆ
ಇತ್ತೀಚಿನ ದಿನಗಳಲ್ಲಿ ಈ ಗೊಂದಲಗಳಿಂದ ಹೊರಗುಳಿದಿದ್ದ ಶಿಗ್ಲಿ ಕೆಟ್ಟ ಹವ್ಯಾಸಗಳಿಂದ ದೂರ ಉಳಿದು ಸುಧಾರಣೆಗೊಂಡಿದ್ದನು. ಈತನ ಪತ್ನಿ ಗುಲ್ಜಾರಾಬಾನು ಶೇಖ್ ಶಿಗ್ಲಿ ಗ್ರಾಮ ಪಂಚಾಯತ್ನ 1ನೇ ವಾರ್ಡಿನಿಂದ ಕಣಕ್ಕಿಳಿದಿದ್ದರು.
ಮೂವರು ಕಣದಲ್ಲಿದ್ದ ಮಹಿಳಾ 'ಎ' ವರ್ಗದ ಮೀಸಲಾತಿಯಲ್ಲಿ ಸ್ಪರ್ಧಿಸಿದ ಇವರು ಕೇವಲ ಎರಡು ಮತಗಳಿಂದ ಜಯ ಗಳಿಸಿದ್ದಾರೆ. ಚುನಾವಣೆಯಲ್ಲಿ ಯಾರಿಗೂ ಹಣ ಹಂಚಿಲ್ಲ. ಆ ಶಕ್ತಿಯೂ ನಮಗಿಲ್ಲ. ನನ್ನ ವಾರ್ಡಿನ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗುಲ್ಜಾರಾಬಾನು ಪ್ರತಿಕ್ರಿಯೆ ನೀಡಿದ್ದಾರೆ.