ಗದಗ: ಮದುವೆ ಸೀಸನ್ ಬಂದರೆ ಸಾಕು ಬೆಟಗೇರಿ ರೇಷ್ಮೆ ಸೀರೆಗಳಿಗೆ ಭಾರಿ ಬೇಡಿಕೆ. ಆದರೆ ಕೊರೊನಾ ಹೆಮ್ಮಾರಿ ಹೊಡೆತದಿಂದ ನೂರಾರು ನೇಕಾರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಇಲ್ಲಿ ನೇಯ್ದ ಸೀರೆಗಳಿಗಳು ರಾಜ್ಯದಲ್ಲಿ ಹೆಸರುವಾಸಿ. ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಗೂ ರಫ್ತಾಗುತ್ತವೆ. ಲಾಕ್‍ಡೌನ್ ಬಡ ನೇಕಾರನ ಬದುಕು ಮೂರಾಬಟ್ಟೆ ಮಾಡಿದೆ. ಬದುಕು ನಡೆಸುವುದೇ ಕಷ್ಟವಾಗಿದೆ. ಮದುವೆ ಸೀಸನ್ ಬಂದ್ರೆ ಸಾಕು ಗದಗದ ಬೆಟಗೇರಿಯ ನೇಕಾರ ಕುಟುಂಬಗಳಿಗೆ ಕೈ ತುಂಬಾ ಕೆಸಲವಿರುತ್ತಿತ್ತು. ಯಾಕಂದ್ರೆ ರೇಷ್ಮೆ, ಇಳಕಲ್ ಸೀರೆ ಸೇರಿ ವಿವಿಧ ನಮೂನೆಯ ಸೀರೆಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು.
ಇಲ್ಲಿ ನೇಯ್ದ ಸೀರೆಗಳು ಮಹಾರಾಷ್ಟ್ರ, ರಾಜ್ಯದ ಬೆಂಗಳೂರು, ದಾವಣಗೆರೆ, ವಿಜಯಪುರ, ಬೆಳಗಾವಿ ರಫ್ತಾಗುತ್ತವೆ. ಲಾಕ್‍ಡೌನ್ ಹಿನ್ನೆಲೆ ಕಚ್ಚಾ ವಸ್ತುಗಳ ಪೂರೈಕೆ ಸ್ಥಗಿತವಾಗಿದೆ. ಬೆಂಗಳೂರಿನಿಂದ ರೇಷ್ಮೆ, ವಿವಿಧ ರಾಜ್ಯಗಳಿಂದ ಕಚ್ಚಾ ನೂಲು ಬರುತ್ತಿಲ್ಲ. ನಾಲ್ಕೈದು ದಿನಗಳಾದ್ರೆ ಕಚ್ಚಾ ನೂಲು ಮುಗಿದು ನೇಕಾರಿಕೆಯೇ ಸ್ತಬ್ಧವಾಗುತ್ತೆ. ಆಗ ನೇಕಾರರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಕೂಡಲೇ ನಮ್ಮ ನೆರವಿಗೆ ಧಾವಿಸಬೇಕು ಎಂದು ನೇಕಾರರು ಮನವಿ ಮಾಡಿದ್ದಾರೆ.