ಗದಗ: ಕಲಬುರಗಿಯಲ್ಲಿ ನಡೆಯಲಿರುವ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಹೊರಟಿದ್ದ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಬಸ್ ಇಲ್ಲದೆ ಪರದಾಡುವಂತಾಯಿತು.
ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಪರೀಕ್ಷಾರ್ಥಿಗಳು ಬೇಡಿಕೊಂಡರೂ ಅವರು ಸ್ಪಂದಿಸಲಿಲ್ಲ. ಇದರಿಂದಾಗಿ ಪೊಲೀಸ್ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಅಭ್ಯರ್ಥಿಗಳ ಆಸೆ ಕಮರಿದಂತಾಗಿದೆ. ಬೆಳಿಗ್ಗೆ ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ ನಡೆಯಲಿದೆ. ಆ ಕಡೆ ತೆರಳುವ ಎಲ್ಲ ಬಸ್ಗಳು ಭರ್ತಿಯಾಗಿವೆ. ಕೂಡಲೇ ಬೇರೊಂದು ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ಅಭ್ಯರ್ಥಿಗಳು ಕೆಎಸ್ಆರ್ಟಿಸಿ ಸಿಬ್ಬಂದಿಗೆ ಮನವಿ ಮಾಡಿದ್ದರು. ಇಷ್ಟೊತ್ತಿನಲ್ಲಿ ಬಸ್ ಸೌಲಭ್ಯ ಕಲ್ಪಿಸಲು ಆಗುವುದಿಲ್ಲ ಎಂದು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎಂಬ ಮಾಹಿತಿ ಇದೆ.
ಹೆಚ್ಚುವರಿ ಬಸ್ ಒದಗಿಸುವಂತೆ ಮನವಿ ಮಾಡಿಕೊಂಡರೂ ಸ್ಪಂದಿಸದ ಕಾರಣ ಅಭ್ಯರ್ಥಿಗಳು ಬಸ್ ತಡೆ ನಡೆಸಿದರು. ಗದಗದಿಂದ ಯಾದಗಿರಿಗೆ ಹೊರಟಿದ್ದ ರಾಜಹಂಸ ಬಸ್ ತಡೆದು, ಕಲಬುರಗಿಗೆ ಹೆಚ್ಚುವರಿ ಬಸ್ ಕಲ್ಪಿಸುವವರೆಗೂ ಈ ಬಸ್ ಚಲಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪರೀಕ್ಷಾರ್ಥಿಗಳು ಗದಗ ಶಾಸಕ ಎಚ್.ಕೆ. ಪಾಟೀಲ್ ಅವರಿಗೆ ಕರೆ ಮಾಡಿ, ತಮ್ಮ ಅಸಹಾಯಕತೆ ವಿವರಿಸಿದರು. ಯುವಕರಿಗೆ ಬಸ್ ಒದಗಿಸುವಂತೆ ಸಿಬ್ಬಂದಿಗೆ ಶಾಸಕರು ಸೂಚಿಸಿದ್ದರೂ ಅವರ ಮಾತಿಗೂ ಯಾವುದೇ ಬೆಲೆ ಕೊಡಲಿಲ್ಲ. ರಾತ್ರಿ 9ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಸಿಬ್ಬಂದಿ ಬಸ್ ಒದಗಿಸದೆ ಅಭ್ಯರ್ಥಿಗಳನ್ನು ನಡು ರಸ್ತೆಯಲ್ಲಿ ನಿಲ್ಲುವಂತೆ ಮಾಡಿದರು.
ಇದರಿಂದ ಕುಪಿತಗೊಂಡ ಅಭ್ಯರ್ಥಿಗಳು ಬಸ್ ಡಿಪೋ ಮ್ಯಾನೇಜರ್ ಅವರನ್ನು ತರಾಟೆ ತೆಗೆದುಕೊಂಡು, ಇದೇ ಪರಿಸ್ಥಿತಿಯಲ್ಲಿ ನಿಮ್ಮ ಮಕ್ಕಳಿದ್ದರೆ ಹೀಗೆಯೇ ವರ್ತಿಸುತ್ತಿದ್ದಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಿದರು. ಹೀಗೆ ವಿದ್ಯಾರ್ಥಿಗಳು ಪೊಲೀಸ್ ಆಗುವ ಕನಸು ನುಚ್ಚುನೂರಾಯಿತು. ಪರೀಕ್ಷೆಗೆ ಕಲಬುರಗಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಕೆಎಸ್ಆರ್ಟಿಸಿ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಮನೆಯತ್ತ ಹೆಜ್ಜೆ ಹಾಕಿದ್ರು.