ಗದಗ: ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿ ನಲುಗಿದ್ದ ಜನ, ಈ ಬಾರಿ ಮತ್ತೆ ಬೆಣ್ಣೆ ಹಳ್ಳ ಧುಮ್ಮಿಕ್ಕಿ ಹರಿಯುತ್ತಿರುವುದರಿಂದ ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ. ಬೆಣ್ಣೆ ಹಳ್ಳದ ಪ್ರವಾಹಕ್ಕೆ ಈಗಾಗಲೇ ಒಂದು ಸೇತುವೆ ಮುಳುಗಡೆಯಾಗಿದೆ. ಜೊತೆಗೆ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇಳೆಯಲ್ಲ ನೀರಾಗಿದೆ. ಪರಿಣಾಮ ಇರೋ ಬರೋ ಎಲ್ಲಾ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇತ್ತ ಬೆಣ್ಣೆ ಹಳ್ಳ ಪ್ರವಾಹದ ಆತಂಕ ಹೆಚ್ಚಿಸಿದೆ. ಜಿಲ್ಲೆಯ ನರಗುಂದ ಹಾಗೂ ರೋಣ ಪಟ್ಟಣ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ. ನರಗುಂದ ತಾಲೂಕಿನ ಯಾವಗಲ್ ಬಳಿ ಇರುವ ಸೇತುವೆ ಮುಳುಗಡೆಯಾಗಿ ಎರಡೂ ಬದಿಯಲ್ಲಿ ವಾಹನ ಸವಾರರು ಪರದಾಡಿದ್ದಾರೆ. ಜೊತೆಗೆ ನದಿ ಪಕ್ಕದಲ್ಲಿನ ನೂರಾರು ಎಕರೆ ಹೆಸರು, ಗೋವಿನ ಜೋಳ ನೀರುಪಾಲಾಗಿದೆ.
ಮಲಪ್ರಭಾ ನದಿ ಪ್ರವಾಹ, ಜಿಲ್ಲೆಯ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಮೆಣಸಿಗಿ, ಹೊಳೆ ಆಲೂರು, ಶಿರೋಳ, ಕೊಣ್ಣೂರು ಹೀಗೆ ಹತ್ತಾರು ಹಳ್ಳಿಗಳು ಮಲಪ್ರಭಾ ನದಿ ಪ್ರವಾಹಕ್ಕೊಳಗಾಗುವ ಸಾಧ್ಯತೆ ಇದೆ. ಆದರೆ, ಇತ್ತ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಕ್ರಮಗಳು ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.