ಗದಗ: ಕೊರೊನಾ ಕಟ್ಟಿಹಾಕಲು ರಾಜ್ಯಾದ್ಯಂತ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರಿಗೆ ಮಾತ್ರ ಜನರು ಹಾಗೂ ವಾಹನ ಸಂಚಾರಕ್ಕೆ ಅವಕಾಶ ಇದೆ. ನಂತರ ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದೇ ಒಂದು ವಾಹನ ರಸ್ತೆಗಿಳಿಯಲ್ಲ. ಸಂಚರಿಸಿದರೆ ಪೊಲೀಸರು ದಂಡ ಹಾಕ್ತಾರೆ ಜೊತೆಗೆ ವಾಹನಗಳನ್ನು ಸಹ ಜಪ್ತಿ ಮಾಡ್ತಾರೆ. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಲು ಜನ ಪರದಾಡುತ್ತಿದ್ದಾರೆ. ಇದನ್ನರಿತ ಗದಗ ಜಿಲ್ಲಾ ಆಟೋ ಮಾಲೀಕರು ಹಾಗೂ ಆಟೋ ಚಾಲಕರ ಸಂಘದಿಂದ ಸಮಾಜಮುಖಿ ಕೆಲಸ ನಡೆದಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ತುರ್ತಾಗಿ ಗರ್ಭಿಣಿಯರು, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು, ಸೇರಿದಂತೆ ಕೊರೊನಾ ಪಾಸಿಟಿವ್ ವ್ಯಕ್ತಿಗಳನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲು ಆಟೋ ಚಾಲಕರು ಶ್ರಮಿಸುತ್ತಿದ್ದಾರೆ. ಸ್ಥಿತಿವಂತರು ತಮ್ಮ ವಾಹನಗಳ ಮೂಲಕ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಬಡ ಜನರು ಜನತಾ ಕರ್ಫ್ಯೂ ಸಮಯದಲ್ಲಿ ಆಸ್ಪತ್ರೆಗೆ ಹೋಗಲು ಸಂಕಷ್ಟ ಅನುಭವಿಸುತ್ತಾರೆ. ಹೀಗಾಗಿ ಸಮಾನ ಮನಸ್ಕರು ಸೇರಿಕೊಂಡು ಅವಳಿ ನಗರದಲ್ಲಿ ಉಚಿತ ಸೇವೆ ಆರಂಭಿಸಿದ್ದೇವೆ. ಸಾಕಷ್ಟು ಜನರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಇದೊಂದು ಸಮಾಜ ಸೇವೆ ಅಂತಾ ಮಾಡಲಾಗುತ್ತಿದೆ ಅಂತಾರೆ ಆಟೋ ಚಾಲಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮನಗುಂಡಿ.
ಈ ಆಟೋ ಚಾಲಕರಿಗೆ ಕಾಲ್ ಮಾಡಿದರೆ ಸಾಕು, ಗದಗ-ಬೆಟಗೇರಿ ಅವಳಿ ನಗರದಲ್ಲಿ ಯಾವುದೇ ಪ್ರದೇಶದಲ್ಲಿ ತುರ್ತಾಗಿ ಚಿಕಿತ್ಸೆ ಬೇಕಾದವರನ್ನು ಅವರು ಹೇಳಿದ ಆಸ್ಪತ್ರೆಗೆ ಮುಟ್ಟಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಸ್ತಮಾ ರೋಗಿಗಳು, ಹೃದಯಾಘಾತಕ್ಕೆ ಒಳಗಾದವರು ಹಾಗೂ ಗರ್ಭಿಣಿಯರಿಗೆ ಉಚಿತ ಸೇವೆ ಒದಗಿಸುವ ಮೂಲಕ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಪಾಸಿಟಿವ್ ಕೇಸ್ ಗಳು ಇದ್ದರು ಕೂಡಾ ಅವರನ್ನು ಕೋವಿಡ್ ಸೆಂಟರ್ಗಳಿಗೆ ಸೇರಿಸುವ ಕೆಲಸ ಮಾಡ್ತಾರೆ. ಆಟೋ ಚಾಲಕರು ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಹೀಗೆ ನಗರದ ಬೇರೆ ಬೇರೆ ಕಡೆಯಿಂದ ಸಹಾಯಕ್ಕೆ ಕರೆಯುವ ರೋಗಿಗಳಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಗದಗ- ಬೆಟಗೇರಿ ಅವಳಿ ನಗರ 12 ಜನ ಆಟೋ ಚಾಲಕರು ನಿಸ್ವಾರ್ಥ ಸೇವೆ ಮಾಡಿ ಜನರ ಜೀವವನ್ನು ಕಾಪಾಡುತ್ತಿದ್ದಾರೆ.