ಗದಗ: ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಅಂಗನವಾಡಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ತಾಲೂಕಿನ ಚಿಂಚಲಿ ಗ್ರಾಮ ಪಂಚಾಯಿತಿ ಸದಸ್ಯ ಮುತ್ತಪ್ಪ ಸಂದಕದ ಎಂಬಾತ ಅದೇ ಗ್ರಾಮದ ಅಂಗನವಾಡಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಜನವರಿ 1ರಂದು ಸಂತ್ರಸ್ತೆಯನ್ನು ಆತನ ಮನೆಗೆ ರಾತ್ರಿ ಕರೆಸಿ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. "ನಾನು ಎಲೆಕ್ಷನ್ನಲ್ಲಿ ಐದು ಲಕ್ಷ ರೂ. ಖರ್ಚು ಮಾಡಿದ್ದೇನೆ. ಅದನ್ನು ಹೇಗೆ ಮತ್ತೆ ಹೊಂದಾಣಿಕೆ ಮಾಡಲಿ" ಎಂದು ಆಕೆಗೆ ಅವಾಜ್ ಹಾಕಿದ್ದಾನೆ.
ಇನ್ನು ಆಕೆಗೆ ವಸತಿ ಯೋಜನೆಯಡಿ ಮಂಜೂರಾಗಿದ್ದ ಮನೆಗೆ ನಾಲ್ಕನೇ ಕಂತಿನ ಬಿಲ್ ಇನ್ನೂ ಮಂಜೂರಾಗದೆ ಇದ್ದು, ಅದನ್ನು ಮಂಜೂರಾಗದಂತೆ ನೋಡಿಕೊಂಡಿದ್ದಾನಂತೆ. ಹಣ ಕೊಡದೇ ಇದ್ದರೆ ನಿನ್ನ ದೇಹ ಒಪ್ಪಿಸು ಅಂತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮುತ್ತಪ್ಪ ಸಂದಕದ ಮರು ಆಯ್ಕೆಯಾಗಿದ್ದಾನೆ. ಇನ್ನು ಮಹಿಳೆಯ ಅಣ್ಣ ಅಂಗನವಾಡಿಯಿಂದ ಹಾಲಿನ ಪ್ಯಾಕೆಟ್ ತೆಗೆದುಕೊಂಡು ಹೋಗುವಾಗ ಅವನನ್ನು ರೆಡ್ ಹ್ಯಾಂಡ್ ಆಗಿ ಮುತ್ತಪ್ಪ ಹಿಡಿದಿದ್ದ. ಇನ್ನು ಈ ವಿಚಾರದಲ್ಲಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ರಾತ್ರಿ 11 ಗಂಟೆ ಸಮಯಕ್ಕೆ ಮನೆಗೆ ಕರೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಘಟನೆಯ ಬಗ್ಗೆ ಅಲ್ಲಿನ ಕೆಲ ಯುವಕರು ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಮಹಿಳೆಗೆ ಈ ಬಗ್ಗೆ ಬಾಯಿ ಬಿಟ್ಟರೆ ಮುಂದೆ ತೊಂದರೆ ಕೊಡುವುದಾಗಿಯೂ ಧಮ್ಕಿ ಹಾಕಿದ್ದಾನಂತೆ. ಹಾಗಾಗಿ ಆ ಮಹಿಳೆ ಕೆಲವು ಹಿರಿಯರ ಬಳಿ ದೂರು ನೀಡಿ ನನಗೆ ಸಹಾಯ ಮಾಡಿ ಅಂತ ಅಂಗಲಾಚಿದ್ದಾಳೆ. ಮಹಿಳೆ ಭಯಗೊಂಡು ದೇವರ ಮೊರೆ ಹೋಗಿದ್ದಾಳೆ. ಇದೀಗ ಗ್ರಾಮದ ಕೆಲ ಯುವಕರು ಮಹಿಳೆಯ ಸಹಾಯಕ್ಕೆ ನಿಂತಿದ್ದಾರೆ
ಇನ್ನು ಈ ಸದಸ್ಯನ ಆಟಾಟೋಪ ಅನೇಕರಿಗೆ ತಲೆನೋವಾಗಿ ಪರಿಣಮಿಸಿದೆ. ಹಲವು ಅಧಿಕಾರಿಗಳಿಗೂ ಆರ್ಟಿಐ ಅರ್ಜಿ ಹಾಕಿ ಅವರನ್ನೂ ಸಹ ಬೆದರಿಸಿ ಹಣ ಪೀಕಿದ್ದಾನೆ ಎಂಬ ಆರೋಪಗಳು ಸಹ ಇವೆ.