ಗದಗ: ಆ ಯುವಕ ಎಲ್ಲರಂತೆ ಪದವಿ ಕನಸು ಕಾಣಲಿಲ್ಲ. ಉಳಿದವರಂತೆ ಮಾಸ್ಟರ್ ಡಿಗ್ರಿ ಮಾಡಿ ಸಾಫ್ಟ್ವೇರ್ ಕಂಪನಿ ಉದ್ಯೋಗ ಬಯಸಲಿಲ್ಲ. ಜಾಬ್ ಮಾಡಿದರೆ ಎಲ್ಲರೂ ಹುಬ್ಬೇರಿಸಿ ಶಹಬಾಷ್ ಅನ್ನೋ ಕೆಲಸಾನೇ ಮಾಡ್ಬೇಕು ಅನ್ನೋದು ಆತನ ಛಲವಾಗಿತ್ತು. ಆ ಯುವಕ ಕಂಡ ಕನಸೇ ವಿಶಿಷ್ಟ, ಆಯ್ಕೆ ಮಾಡಿಕೊಂಡ ಗುರಿಯೇ ಅಂಥದ್ದು, ಕೊನೆಗೂ ಛಲದಂಕ ಮಲ್ಲನಂತೆ ಕಿರಿದಾದ ವಯಸ್ಸಿನಲ್ಲೇ ರಾಜ್ಯವೇ ಹೆಮ್ಮೆ ಪಡುವಂತೆ ಸಾಧನೆ ಮಾಡಿದ್ದಾನೆ.
ಮುದ್ರಣ ಕಾಶಿ ಗದುಗಿನ 24 ವರ್ಷದ ಯುವಕ ಆದಿತ್ಯ ಅಡಿಗ ಇದೀಗ ರಾಜ್ಯಕ್ಕೇ ಮಾದರಿಯಾಗಿದ್ದಾನೆ. ಇನ್ಸ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ 'ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ'ಯಲ್ಲಿ ಆದಿತ್ಯ ದೇಶಕ್ಕೆ 10 ನೇ ರ್ಯಾಂಕ್ ಪಡೆದಿದ್ದಾನೆ. ನಗರದ ಕಲಾಮಂದಿರ ರಸ್ತೆಯ ನಿವಾಸಿ ಚಂದ್ರಶೇಖರ್ ಅಡಿಗ ಮತ್ತು ಸುಜಾತಾ ಅಡಿಗ ದಂಪತಿಯ ಒಬ್ಬನೇ ಪುತ್ರ ಆದಿತ್ಯ ಅದ್ಬುತ ಸಾಧನೆ ಮಾಡಿದ್ದಾರೆ.
ಎಲ್ಲ ವಿದ್ಯಾರ್ಥಿಗಳು ಪಿಯುಸಿ ನಂತರ ಪದವಿ, ಉನ್ನತ ಪದವಿಯತ್ತ ಮುಖ ಮಾಡಿದ್ರೆ, ಆದಿತ್ಯ ಮಾತ್ರ ಸ್ವಲ್ಪ ವಿಭಿನ್ನವಾಗಿ ಹೆಜ್ಜೆಯಿಟ್ಟಿದ್ದಾನೆ. ತಂದೆ ಮೊದಲಿನಿಂದಲೂ ಪೌರೋಹಿತ್ಯದ ಆದಾಯದಲ್ಲೇ ಕಷ್ಟಕಟ್ಟು ಜಿವನ ನಡೆಸಿದವರು. ಇದನ್ನ ಅರಿತ ಆದಿತ್ಯ ಏನಾದ್ರೂ ಸಾಧನೆ ಮಾಡಬೇಕು ಅನ್ನೋ ಸಂಕಲ್ಪ ಮಾಡಿದ್ದ. ಹೀಗಾಗಿ ಕಠಿಣವಾದ ಲೆಕ್ಕ ಪರಿಶೋಧಕ ಪರೀಕ್ಷೆಯಲ್ಲಿ ಶೇ 56.12 ರಷ್ಟು ಅಂಕಗಳಿಸಿ ದೇಶಕ್ಕೆ 10 ನೇ ರ್ಯಾಂಕ್ ಪಡೆದು ಉತ್ತರ ಕರ್ನಾಟಕದಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾನೆ.
ಆದಿತ್ಯ ಸಿಎ ಓದಲು ಹೆಚ್ಚಿನ ಕೋಚಿಂಗ್ ಮೊರೆ ಹೋಗಿಲ್ಲ. ಲಾಕ್ಡೌನ್ ಸಮಯದಲ್ಲಿ 10-12 ಗಂಟೆಗಳ ಕಾಲ ನಿರಂತರ ಅಭ್ಯಾಸ ಮಾಡಿದ್ದಾನೆ. ಕಳೆದ ನವೆಂಬರ್ ನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಗ್ರೂಪ್-1 ವಿಭಾಗದಲ್ಲಿ 12,026 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದು, 2,145 ಜನರು ಉತ್ತೀರ್ಣರಾಗಿದ್ದಾರೆ. ಗ್ರುಪ್-2 ವಿಭಾಗದಲ್ಲಿ 17,132 ಅಭ್ಯರ್ಥಿಗಳಲ್ಲಿ 5,442 ಜನರು ತೇರ್ಗಡೆಯಾಗಿದ್ದಾರೆ. ಗ್ರುಪ್-1 ಮತ್ತು 2 ಎರಡನ್ನೂ ಆಯ್ದುಕೊಂಡಿದ್ದ 4,143 ಅಭ್ಯರ್ಥಿಗಳಲ್ಲಿ ಕೇವಲ 242 ಜನ ಉತ್ತೀರ್ಣರಾಗಿದ್ದು, ಈ ಪೈಕಿ ಗದುಗಿನ ಆದಿತ್ಯ ಚಂದ್ರಶೇಖರ್ ಅಡಿಗ ಕೂಡಾ ಒಬ್ಬರು. ಒಟ್ಟು 800 ಅಂಕಗಳಲ್ಲಿ 449 ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
![aditya-ranked-10th-rank-in-chartered-accountant-exam](https://etvbharatimages.akamaized.net/etvbharat/prod-images/10501383_744_10501383_1612458664982.png)
ಸಾಮಾನ್ಯವಾಗಿ ಬಿಕಾಂ, ಎಂ.ಕಾಂ, ಎಂಬಿಎ, ಬಿಬಿಎ ಪದವೀಧರರು ಸಿಎ ಪರೀಕ್ಷೆ ಪಾಸು ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆದರೆ, ಆದಿತ್ಯ ಅಗಡಿ ಪಿಯುಸಿ ಮುಗಿದ ತಕ್ಷಣವೇ ಸಿಎ ಫೌಂಡೇಷನ್ ಪರೀಕ್ಷೆ ಪಾಸು ಮಾಡುವ ಮೂಲಕ ನೇರವಾಗಿ ಸಿಎ ಇಂಟರ್ ಪರೀಕ್ಷೆಗೆ ಅರ್ಹತೆಗಳಿಸಿದ್ದಾನೆ. ಕೇವಲ 24 ವರ್ಷಕ್ಕೆ ಬಹುದೊಡ್ಡ ಸಾಧನೆ ಮೆರೆದಿರುವ ಆದಿತ್ಯನ ಬಗ್ಗೆ ಕುಟುಂಬಸ್ಥರು ಆನಂದ ಬಾಷ್ಪದ ಮೂಲಕ ಹರ್ಷ ವ್ಯಕ್ತಪಡಿಸಿದರು.
ಓದಿ: ಪರಿಷತ್ ಕಲಾಪದಲ್ಲಿ ಶೃಂಗೇರಿ ಅತ್ಯಾಚಾರ ಪ್ರಕರಣ ಚರ್ಚೆ: ಕ್ರಮದ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ
ಆದಿತ್ಯನ ತನ್ನ ತಂದೆ ಪಡುವ ಕಷ್ಟ ಹಾಗೂ ಬಡತನವನ್ನು ಮೆಟ್ಟಿನಿಲ್ಲಬೇಕು ಎಂಬ ದೃಷ್ಟಿಯಿಂದ ಸಾಧನೆ ಶಿಖರ ಏರಲು ಮುಂದಾಗಿದ್ದಾರೆ. ಇದೀಗ ಮಗನ ಸಾಧನೆ ನೋಡಿ ತಂದೆ ತಾಯಿ ಇಬ್ಬರಿಗೂ ಕಷ್ಟ ಮತ್ತು ಸುಖದ ಸಾರ್ಥಕತೆ ತಂದೊಡ್ಡಿದೆ. ಒಟ್ಟಾರೆ ಛಲದಂಕ ಮಲ್ಲನಂತೆ ಆದಿತ್ಯ ಕಷ್ಟ ಪಟ್ಟು ಓದಿ ಸಿಎ ಪರೀಕ್ಷೆನಲ್ಲಿ ಏಕಲವ್ಯನಂತೆ ಸಾಧನೆ ಮಾಡಿದ್ದು, ಜಿಲ್ಲೆಗೆ ಅಷ್ಟೇ ಅಲ್ಲದೆ ರಾಜ್ಯದ ಕೀರ್ತಿ ಸಹ ಹೆಚ್ಚಿಸಿದ್ದಾನೆ.