ಗದಗ : ಒಂದು ಯಶಸ್ಸಿನ ಹಾದಿ ಹಿಂದೆ ಕಠಿಣ ಪರಿಶ್ರಮ ಇದ್ದೇ ಇರುತ್ತೆ. ಕಠಿಣ ಪರಿಶ್ರಮದಿಂದ ಮಾತ್ರ ಸಾಧಕ/ಕಿ ಆಗಲು ಸಾಧ್ಯ. ಈ ಮಾತನ್ನು ತನ್ನ ಜೀವನದಲ್ಲಿ ರೂಢಿಸಿಕೊಂಡ ಯುವಕನೊಬ್ಬ ಪಿಎಸ್ಐ ಪರೀಕ್ಷೆಯಲ್ಲಿ 173ನೇ ರ‍್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದಿದ್ದಾನೆ.
ಊರೂರು ಸುತ್ತಿ ಅಗರಬತ್ತಿ ಮಾರಾಟ ಮಾಡುವ ಮುಂಡರಗಿ ಪಟ್ಟಣದ ಸಾಗರ್ ಅತ್ತರವಾಲಾ ಎಂಬ ಯುವಕ ಈಗ ಪಿಎಸ್ಐ ಹುದ್ದೆಗೆ ಆಯ್ಕೆಯಾಗುವ ಮೂಲಕ ಇನ್ನುಳಿದ ಯುವ ಸಮೂದಾಯಕ್ಕೆ ಮಾದರಿಯಾಗಿದ್ದಾನೆ. ಬಡ ಕುಟುಂಬದಿಂದ ಬಂದ ಸಾಗರ್, ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ ಊದು ಬತ್ತಿ ಮಾರಾಟ ಮಾಡುತ್ತಾ ಬಿಡುವಿನ ಸಮಯದಲ್ಲಿ ಓದಿಕೊಂಡು ಪಿಎಸ್ಐ ಪರೀಕ್ಷೆಯಲ್ಲಿ 173ನೇ ರ‍್ಯಾಂಕ್ ಪಡೆದಿದ್ದಾನೆ. ಕುಟುಂಬದ ನಿರ್ವಹಣೆ ಜೊತೆಗೆ ಓದನ್ನು ಮುಂದುವರೆಸಿಕೊಂಡು ಬಂದಿರುವ ಮಗ ಸಾಗರ್ನ ಸಾಧನೆ ಕಂಡು ತಂದೆ-ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತದ ಜೊತೆ ಮಾತನಾಡಿದ ಸಾಧಕ ಸಾಗರ್, ಚಿಕ್ಕಂದಿನಿಂದಲೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಗುರಿ ಇತ್ತು. ಹೀಗಾಗಿ M.com ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿ ತೊಡಗಿದೆ. ಹಣ ಭರಿಸಿ ಕೋಚಿಂಗ್ ತೆಗೆದುಕೊಳ್ಳುವುದು ಅಸಾಧ್ಯವಾಗಿತ್ತು. ಓದುತ್ತಾ ಹಳೆ ಪ್ರಶ್ನೆ ಪತ್ರಿಕೆ, ಹಳೆ ನೋಟ್ಸ್, ಪತ್ರಿಕೆಗಳು, ಮೊಬೈಲ್ ಮೂಲಕ ಓದಿಗಾಗಿ ಬೇಕಾದ ಮಾಹಿತಿ ಸಂಗ್ರಹ ಮಾಡಿಕೊಳ್ಳುತ್ತಿದ್ದೆ. ಲಾಕ್ಡೌನ್ ವೇಳೆ ಈ ಪರೀಕ್ಷೆ ಬರೆದಿದ್ದೆ. ಇದೀಗ ಫಲಿತಾಂಶ ಬಂದಿದ್ದು ಅಂದುಕೊಂಡಂತೆ ಗುರಿ ಮುಟ್ಟಿರುವೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ನಾವು ಊದು ಬತ್ತಿ ವ್ಯಾಪಾರಸ್ಥರು. ಹೊಟ್ಟೆ ನಿರ್ವಹಣೆಗಾಗಿ ಪಟ್ಟಣದಲ್ಲಿ ಊದು ಬತ್ತಿ ಅಂಗಡಿಯ ವ್ಯಾಪಾರ ಮಡ್ತೇವ್ರಿ. ನಮ್ಮ ಮಗ ಊರೂರು ಸುತ್ತಿ ಅಗರಬತ್ತಿ ಮಾರಾಟ ಮಾಡ್ತಾನ್ರಿ. ಓದಿನಲ್ಲಿ ಮುಂದ ಇದ್ದ. ಆದ್ರೆ ಬಡ ಕುಟುಂಬ ಆಗಿದ್ರಿಂದ ಊದು ಬತ್ತಿ ಮಾರಾಟ ಅನಿವಾರ್ಯವಾಗಿತ್ತು. ಈಗ ಪೊಲೀಸ್ ಪರೀಕ್ಷೆಯಲ್ಲಿ ಪಾಸ್ ಆಗ್ಯಾನ್ರಿ. ನಮಗ ಇದ್ಕಿಂತ ಇನ್ನೇನ್ ಬೇಕ್ರಿ ಎಂದು ಮಗನ ಸಾಧನೆ ಕಂಡು ಹರ್ಷ ವ್ಯಕ್ತಪಡಿಸುತ್ತಾರೆ ಸಾಗರ್ನ ತಂದೆ-ತಾಯಿ.
M.com ಓದುವಾಗಲೇ ಸರ್ಕಾರದಿಂದ ಯುಪಿಎಸ್ಸಿ ಪರೀಕ್ಷೆಯ ಉಚಿತ ಕೋಚಿಂಗ್ಗೆ ಆಯ್ಕೆ ಆಗಿದ್ದ. ನಾಲ್ಕು ತಿಂಗಳು ಕಾಲ ಬೆಂಗಳೂರಿನಲ್ಲಿ ಕೋಚಿಂಗ್ ಪಡೆದಿದ್ದ ಸಾಗರ್, ಪಿಎಸ್ಐ ಹುದ್ದೆಗೆ ಮಾತ್ರ ಯಾವುದೇ ಕೋಚಿಂಗ್ ತೆಗೆದುಕೊಂಡಿರಲಿಲ್ಲ. 2017ರಿಂದ ಪೊಲೀಸ್ ಇಲಾಖೆಗಳಿಗೆ ಸಂಬಂಧಪಟ್ಟ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದರು. ಎರಡು ಬಾರಿ ಸಂದರ್ಶನಕ್ಕೂ ತೆರಳಿ ಬಂದಿದ್ದಾರೆ. ಇನ್ನು ಮುಂಡರಗಿ ಪಟ್ಟಣದಲ್ಲಿ ಓರ್ವ ಯುವಕ ಪಿಎಸ್ಐ ಹುದ್ದೆಗೆ ಏರಿದ್ದು ಇದೇ ಮೊದಲು ಎಂದು ಸ್ಥಳೀಯರು ಯುವಕನ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.