ಗದಗ : ವ್ಯಕ್ತಿಯೊಬ್ಬರು ತಮ್ಮ ಬೈಕ್ ನ ಸೈಡ್ ಬ್ಯಾಗ್ ನಲ್ಲಿರಿಸಿದ್ದ 10 ಲಕ್ಷ ರೂ.ವನ್ನು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ಬಳಿ ಇರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ೧೦ ಲಕ್ಷ ರೂ.ಹಣವನ್ನು ತೆಗೆದು ಬೈಕ್ ನ ಸೈಡ್ ಬ್ಯಾಗ್ ನಲ್ಲಿ ಇರಿಸಿಕೊಂಡು ಹೋಗುವಾಗ ಕಳ್ಳ ಕೈಚಳಕ ತೋರಿದ್ದಾನೆ. ಪಟ್ಟಣದ ರಾಜೇಂದ್ರ ಕಾಟನ್ ಇಂಡಸ್ಟ್ರೀಸ್ನಲ್ಲಿ ಹಲವಾರು ವರ್ಷಗಳಿಂದ ಕಾರ್ಖೂನನಾಗಿ ಸೇವೆ ಸಲ್ಲಿಸುತ್ತಿರುವ ರಾಮನಗೌಡ ಫಕ್ಕೀರಗೌಡ ಪಾಟೀಲ ಎಂಬುವವರು ಹಣ ಕಳೆದುಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ.
ರಾಮನಗೌಡ ಅಕೌಂಟ್‌ನಿಂದ ಹಣ ಡ್ರಾ ಮಾಡಿ ಕೈಚೀಲದಲ್ಲಿ ಹಾಕಿಕೊಂಡು ಬೈಕ್ ಸೈಡ್ ಬ್ಯಾಗ್‌ನಲ್ಲಿರಿಸಿಕೊಂಡು ಹೊರಟಿದ್ದಾರೆ. ಕದಿಯಲು ಹೊಂಚು ಹಾಕಿ ಕುಳಿತಿದ್ದ ಖದೀಮರು ಬೈಕ್ ನ್ನು ಹಿಂಬಾಲಿಸಿದ್ದಾರೆ. ಈ ವೇಳೆ ರಾಮನಗೌಡ್ರ ಬೈಕ್‌ನ್ನು ನಿಧಾನ ಮಾಡಿದ್ದು, ಆಗ ಕಳ್ಳನೋರ್ವ ಕ್ಷಣ ಮಾತ್ರದಲ್ಲಿ ಹಣ ಲಪಟಾಯಿಸಿ ಪರಾರಿಯಾಗಿದ್ದಾನೆ. ಬ್ಯಾಂಕಿನಿಂದ ಕೆಲವೇ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಹಣ ಕಳೆದುಕೊಂಡ ರಾಮನಗೌಡ್ರ ಮಾತನಾಡಿ, ಎಂದಿನಂತೆ ಬ್ಯಾಂಕ್‌ಗೆ ಹಣ ಪಾವತಿಸುವುದು, ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗುವುದು ಮಾಡುತ್ತಿದ್ದೆ. ಇವತ್ತೂ ಹಣವನ್ನು ಡ್ರಾ ಮಾಡಿ ವಾಹನದ ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗುತ್ತಿರುವಾಗ ನನಗೆ ತಿಳಿಯದಂತೆ ಬ್ಯಾಗ್‌ನಿಂದ ಹಣ ಎಗರಿಸಿದ್ದಾರೆ. ಇದರಿಂದ ನನಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ ಎಂದು ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮಾಹಿತಿ ಪಡೆದು ಸುತ್ತಮುತ್ತಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಸಿಸಿ ಟಿವಿಯಲ್ಲಿ ಬೈಕ್‌ನಿಂದ ಓರ್ವ ಹಣ ಎಗರಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ : ಇನ್ಸ್ಟಾದಲ್ಲಿ ಅವನು ಹೇಳಿದಂತೆ ಮಾಡಿದ ಯುವತಿ.. ಬ್ಲ್ಯಾಕ್ಮೇಲ್ಗೆ ಹೆದರಿ ಶಿಕಾರಿಪುರ ಹುಡ್ಗಿ ಆತ್ಮಹತ್ಯೆ