ಧಾರವಾಡ : ವನ್ಯಜೀವಿ ಸಪ್ತಾಹದ ಅಂಗವಾಗಿ ಜಿಲ್ಲೆಯ ಅರಣ್ಯ ಸಂಕೀರ್ಣದ ಕಾಂಪೌಂಡ್ ಗೋಡೆಗೆ ವನ್ಯ ಜೀವಿಗಳ ಚಿತ್ರ ಬಿಡಿಸಿ ಅಂದವನ್ನು ಹೆಚ್ಚಿಸಲಾಗಿದೆ.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಪಕ್ಕದಲ್ಲಿರುವ ಅರಣ್ಯ ಸಂಕೀರ್ಣದ ಕಾಂಪೌಂಡ್ ಗೋಡೆಗೆ ವಿವಿಧ ಚಿತ್ರ ಕಲಾವಿದರು ಹಾಗೂ ಮಕ್ಕಳಿಂದ ವನ್ಯಜೀವಿಗಳ ರಕ್ಷಣೆ, ಸಂರಕ್ಷಣೆ ಕುರಿತು ಗೋಡೆಯ ಮೇಲೆ ಚಿತ್ರ ಬಿಡಿಸಿ ಕಾಡು ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಪ್ರತಿವರ್ಷ ವನ್ಯಜೀವಿ ಸಪ್ತಾಹವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ, ಈ ವರ್ಷ ಕೊರೊನಾ ಹೊಡೆತಕ್ಕೆ ಸರಳವಾಗಿ ವನ್ಯಜೀವಿ ಸಪ್ತಾಹ ಆಚರಣೆ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಸ್ಪರ್ಧೆ ಮತ್ತು ವೆಬಿನಾರ್ ಏರ್ಪಡಿಸಲಾಗಿತ್ತು. ಸ್ವಯಂಪ್ರೇರಿತವಾಗಿ ಸಹ ವಿದ್ಯಾರ್ಥಿಗಳು ಆಗಮಿಸಿ ಅರಣ್ಯ ಸಂಕೀರ್ಣದ ಕಾಂಪೌಂಡ್ ಗೋಡೆ ಮೇಲೆ ಚಿತ್ರ ಬಿಡಿಸಿ ಅದರ ಅಂದ ಹೆಚ್ಚಿಸಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.
ಕಾಂಪೌಂಡ್ ಗೋಡೆ ಮೇಲೆ ವನ್ಯಜೀವಿಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುವ ಮೂಲಕ ಜನರಿಗೆ ತಿಳುವಳಿಕೆ ನೀಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷೀರಸಾಗರ ಮತ್ತು ಅವರ ನೇತೃತ್ವದಲ್ಲಿ ಕಲಾವಿದರು, ವಿದ್ಯಾರ್ಥಿಗಳು ಕಾಂಪೌಂಡ್ ಗೋಡೆಯ ಮೇಲೆ ಚಿತ್ರ ಬಿಡಿಸಿದ್ದಾರೆ.