ಹುಬ್ಬಳ್ಳಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆಯ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಚರ್ಚೆ ಆಗಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ, ಯಾರಿಗೂ ತಿಳಿಯದಂತೆ ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೆ ಆಗುವುದಿಲ್ಲ. ಜಿಲ್ಲಾ ಹಾಗೂ ರಾಜ್ಯ ನಾಯಕರ ಜೊತೆ ಎಲ್ಲರೂ ಸಹ ಚರ್ಚಿಸಿದ ನಂತರ ನಮ್ಮ ರಾಷ್ಟ್ರೀಯ ನಾಯಕರ ಜೊತೆ ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಆದರೆ ಇಲ್ಲಿಯವರೆಗೂ ವಿನಯ ಕುಲಕರ್ಣಿ ಬಗ್ಗೆ ಯಾವ ಚರ್ಚೆಯೂ ಆಗಿಲ್ಲ. ನಾನು ಇದೇ ಜಿಲ್ಲೆಯ ಜನಪ್ರತಿನಿಧಿಯಾಗಿ ನನ್ನ ಗಮನಕ್ಕೂ ಸಹ ಬಂದಿಲ್ಲ. ಯಾರೇ ಬಿಜೆಪಿಗೆ ಸೇರ್ಪಡೆಗೊಳ್ಳುವುದಿದ್ದರೆ, ಬಿಜೆಪಿ ಕೇಡರ್ ಬೇಸ್ ಪಾರ್ಟಿ. ಸ್ಥಳೀಯ ನಾಯಕರೇ ಅವರನ್ನ ರಾಷ್ಟ್ರೀಯ ನಾಯಕರ ಬಳಿ ಭೇಟಿ ಮಾಡಿಸಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಇದು ರಾಜಕೀಯ ಪ್ರೇರಿತವಾಗಿಲ್ಲ. ಡಿಕೆಶಿ ಪ್ರಾಮಾಣಿಕರಾಗಿದ್ದರೆ ಹೆದರುವ ಅವಶ್ಯಕತೆ ಇಲ್ಲ. ಡಿಕೆಶಿ ವಿರುದ್ಧ ಕೇಸ್ ಹಾಕಿ, ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿಯೇ ಚುನಾವಣೆ ಗೆಲ್ಲುವ ಅನಿವಾರ್ಯತೆ ಬಿಜೆಪಿಗಿಲ್ಲ. ಕಾನೂನಿನಡಿ ದಾಳಿ ನಡೆದಿದೆಯೇ ಹೊರತು ರಾಜಕೀಯ ಹಸ್ತಕ್ಷೇಪ ಇಲ್ಲ. ಅವರು ಹೊರಗಿದ್ದರೂ ಸಹ ನಾವು ಉಪಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದರು.