ಹುಬ್ಬಳ್ಳಿ: ಬರುವ ಎಪ್ರಿಲ್ 23 ರಂದು ಧಾರವಾಡ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಮತದಾನದಲ್ಲಿ ಭಾಗವಹಿಸಿ ತಪ್ಪದೇ ಎಲ್ಲರೂ ಮತಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ ಸಿಇಒ ಡಾ.ಬಿ.ಸಿ. ಸತೀಶ್ ಗಾಳಿ ಪಟ ಹಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಮುಂಜಾನೆ ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಲಾಗಿದ್ದ ಗಾಳಿಪಟದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಡಾ.ರಾಮು ಮೂಲಗಿ, ಪ್ರಕಾಶ್ ಕಂಬಳಿ ಅವರ ನೇತೃತ್ವದ ಜಾನಪದ ಗೀತೆಗಳ ಗಾಯಕರ ತಂಡವು ಸ್ವರಚಿತ ಗೀತೆಗಳನ್ನು ಹಾಡಿ ಗ್ರಾಮಗಳಿಗೆ ತೆರಳಿ ಮತದಾನ ಧಾರವಾಡ ಹಾಗೂ ಹುಬ್ಬಳ್ಳಿ ನಗರದಲ್ಲಿ ಗಾಳಿಪಟ ಉತ್ಸವ ಆಯೋಜಿಸುವ ಮೂಲಕ ವಿನೂತನವಾಗಿ ಮತದಾನದ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮಹಾರಾಷ್ಟ್ರದ ದಾನೂರಿನಿಂದ ಆಗಮಿಸಿದ್ದ ಅಶೋಕ್ ಷಾ ತಂಡ ಗಾಳಿಪಟಗಳನ್ನು ಬಾನಿನಲ್ಲಿ ಹಾರಾಡಿಸಿದರು. ಕಲಾವಿದರಾದ ಡಾ.ರಾಮು ಮೂಲಗಿ, ಪ್ರಕಾಶ್ ಕಂಬಳಿ, ರಮೇಶ್ ಕಬ್ಬೇರಹಳ್ಳಿಯವರ ತಂಡ ಸ್ವರಚಿತ ಮತಾದನದ ಕುರಿತ ಗೀತೆಗಳನ್ನು ಪ್ರಸ್ತುತಪಡಿಸಿದರು.
ಹುಬ್ಬಳ್ಳಿ ಶಹರ್ ತಹಶಿಲ್ದಾರ್ ಶಶಿಧರ ಮಾಡ್ಯಳಾ, ಬಿಇಒ ಹುಡೇದಮನಿ, ಅಧಿಕಾರಿಗಳು, ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸದಸ್ಯರು, ಸಾರ್ವಜನಿಕರು ಮತದಾನ ಅಭಿಯಾನದಲ್ಲಿ ಭಾಗಿಯಾಗಿದ್ದರು.