ಹುಬ್ಬಳ್ಳಿ : ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಚಟುವಟಿಕೆಯ ಭಾಗವಾಗಿ ವ್ಯಂಗ್ಯಚಿತ್ರಗಳ ಮೂಲಕ ಮತದಾನದ ಮಹತ್ವ ಸಾರುವ ಆಕರ್ಷಕ ಕಾರ್ಯ ಮಾಡುತ್ತಿದೆ.
ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸಂಜೀವ್ ಕಾಳೆ ಅವರು ತಮ್ಮ ಕಲಾಪ್ರತಿಭೆಯ ಮೂಲಕ ವ್ಯಂಗ್ಯಚಿತ್ರಗಳನ್ನು ಬಿಡಿಸಿದ್ದಾರೆ. ರೇಖೆಗಳಲ್ಲಿ ವರ್ಣರಂಜಿತವಾಗಿ, ವಿಡಂಬನೆ ಹಾಗೂ ಸಂದೇಶವನ್ನು ಸಾರುವ 23 ಕ್ಕೂ ಹೆಚ್ಚು ವೈವಿಧ್ಯಮಯ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ ಸತೀಶ್ ಅವರ ಸಲಹೆ ಮತ್ತ ಮಾರ್ಗದರ್ಶನದಡಿ ಈ ವ್ಯಂಗ್ಯಚಿತ್ರಗಳು ಮೂಡಿಬಂದಿವೆ.
ಭಾರತ ಚುನಾವಣಾ ಆಯೋಗ, ಸ್ವೀಪ್ ಲಾಂಛನಗಳನ್ನೊಳಗೊಂಡಂತೆ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‌ಗಳನ್ನು ಸ್ಥಾಯಿಯಾಗಿಟ್ಟುಕೊಂಡು, ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದು. 18 ವರ್ಷ ತುಂಬಿದ ಯುವ ಜನರು ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ತಿಳುವಳಿಕೆ ನೀಡುವುದು. ಒಂದು ವಾಸಸ್ಥಳ ಬಿಟ್ಟು ಬೇರೆಡೆಗೆ ತೆರಳಿರುವ ಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಕೋರುವುದು. ತೃತೀಯ ಲಿಂಗಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಹೆಮ್ಮೆಯಿಂದ ಮತ ಚಲಾಯಿಸುವುದು. ಹಿರಿಯ ನಾಗರಿಕರು ಮತಚಲಾಯಿವುದು. ನವಜೋಡಿಗಳು ಮತದಾನ ದಿನದ ಕರ್ತವ್ಯ ಮರೆತು ರಜೆಯ ಮಜಾ ಮಾಡಲು ಪ್ರವಾಸಕ್ಕೆ ಹೊರಟಿರುವ ಚಿತ್ರಗಳು ಪರಿಣಾಮಕಾರಿಯಾಗಿ ಕಾಳೆಯವರ ಕುಂಚದಲ್ಲಿ ಅರಳಿವೆ.
ಇದೇ ಮೊದಲ ಬಾರಿಗೆ ಮತದಾನಕ್ಕೆ ಅರ್ಹತೆ ಪಡೆದಿರುವ ಮತದಾರರಿಗಾಗಿ ಏರ್ಪಡಿಸಿರುವ ಸೆಲ್ಫಿ ವಿತ್ ಬೂತ್, ವಿಕಲಚೇತನರಿಗೆ ಮತಗಟ್ಟೆಗೆ ಬರಲು ಕಲ್ಪಿಸಿರುವ ಸೌಕರ್ಯಗಳ ಕುರಿತ ಹಾಗೂ ಮಹಿಳಾ ಸಿಬ್ಬಂದಿಯಿಂದಲೇ ಕೂಡಿರುವ ಸಖಿ ಮತಗಟ್ಟೆಗಳ ಬಗೆಗೆ ರಚಿಸಿರುವ ವ್ಯಂಗ್ಯಚಿತ್ರಗಳು ಜನಮನ ಸೆಳೆಯುತ್ತಿವೆ.
ಈ ವ್ಯಂಗ್ಯಚಿತ್ರಗಳನ್ನು ಸ್ಟಿಕರ್‌ಗಳನ್ನಾಗಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವ, ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಪ್ರದರ್ಶನ ಮಾಡುವ ಕಾರ್ಯಕ್ರಮಗಳನ್ನು ಏರ್ಪಡಿಸಲು ಜಿಲ್ಲಾ ಸ್ವೀಪ್ ಸಮಿತಿ ಉದ್ದೇಶಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಇವುಗಳನ್ನು ಮತದಾರರಿಗೆ ತಲುಪಿಸಲಾಗುತ್ತಿದೆ. ರೇಖೆಗಳ ಮೂಲಕ ಮತದಾರರನ್ನು ಜಾಗೃತಿಗೊಳಿಸುವ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.