ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆ ಇಂದು ವಿನಯ್ ನ್ಯಾಯಾಂಗ ಬಂಧನ ವಿಚಾರಣೆ ನಡೆಯಲಿದೆ.
ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ವಿನಯ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಈಗಾಗಲೇ ಮಾಜಿ ಸಚಿವ ವಿನಯ್ ಕುಲಕರ್ಣಿ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರೋ ಜಾಮೀನು ಅರ್ಜಿ ಹಿನ್ನೆಲೆ ಇಂದು ಪುನಃ ವಿನಯ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಓದಿ :ಜೈಲಿನಲ್ಲಿರುವ ರಾಗಿಣಿ ಆರೋಗ್ಯ ವಿಚಾರವಾಗಿ ಪ್ರಶ್ನೆ ಮಾಡಿದ ಜೈಲಾಧಿಕಾರಿಗೆ ಶಾಕ್!
ಇತ್ತ ವಿನಯ್ ಸೋದರ ಮಾವ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮಾ ನ್ಯಾಯಾಂಗ ಬಂಧನ ಕೂಡ ಇಂದು ಅಂತ್ಯಗೊಂಡಿದೆ. ಹಂತಕರಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪದಡಿ ಚಂದ್ರಶೇಖರ್ ಇಂಡಿ ಜೈಲು ಪಾಲಾಗಿದ್ದಾರೆ.
ಎರಡು ವಾರಗಳ ಹಿಂದೆ ಸಿಬಿಐ ಇಂಡಿ ಅವರನ್ನು ಬಂಧಿಸಿದ್ದರು. ಸದ್ಯ ಅವರು ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇಂದು ಇಂಡಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.