ಹುಬ್ಬಳ್ಳಿ: ರಾಜ್ಯ ರಾಜಕೀಯದ ಜಿದ್ದಾಜಿದ್ದಿ ಕಣದಲ್ಲಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರ ಕೂಡ ಒಂದು. ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಣದಲ್ಲಿದ್ದರೆ, ಬಿಜೆಪಿಯಿಂದ ಅವರ ಶಿಷ್ಯ ಮಹೇಶ್ ಟೆಂಗಿನಕಾಯಿ ಪ್ರತಿಸ್ಪರ್ಧಿಯಾಗಿದ್ದಾರೆ. ಉಳಿದಂತೆ ಜೆಡಿಎಸ್ ಹಾಗೂ ಇತರೆ ರಾಜಕೀಯ ಪಕ್ಷಗಳು ಕೂಡ ಪೈಪೋಟಿಗೆ ಇಳಿದಿವೆ.
ಇದೇ ಕ್ಷೇತ್ರದಿಂದ ಗೆದ್ದ ಎಸ್. ಆರ್. ಬೊಮ್ಮಾಯಿ 11ನೇ ಮುಖ್ಯಮಂತ್ರಿಯಾಗಿದ್ದರು. ಬಳಿಕ ಇದೇ ಕ್ಷೇತ್ರದಿಂದ ಗೆದ್ದ ಜಗದೀಶ್ ಶೆಟ್ಟರ್ ಕೂಡ 21ನೇ ಮುಖ್ಯಮಂತ್ರಿಯಾಗಿದ್ದರು. ಆಗಿನಿಂದ ಈಗಲೂ ನಾನಾ ಕಾರಣಗಳಿಂದ ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿಯೇ ಉಳಿದಿದೆ. ಸದ್ಯ ಬದಲಾದ ರಾಜಕೀಯ ಬೆಳವಣಿಗೆ ಹಾಗೂ ಸನ್ನಿವೇಶಗಳಿಂದ ಇತ್ತೀಚೆಗೆ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಅವರ ನಡೆಯಿಂದ ಕ್ಷೇತ್ರ ಮತ್ತೆ ಗಮನ ಸೆಳೆಯುತ್ತಿದೆ. ಕ್ಷೇತ್ರದಲ್ಲಿ ನೇರ ಹಣಾಹಣಿ ಇದ್ದು, ಅವರನ್ನು ಸೋಲಿಸುವ ಹಠಕ್ಕೆ ಬಿದ್ದಿರುವ ಬಿಜೆಪಿ, ಇನ್ನಿಲ್ಲದ ತಂತ್ರಗಾರಿಕೆ ರೂಪಿಸಿಕೊಂಡಿದೆ. ಗೆದ್ದೇ ಗೆಲ್ಲುವೆ ಎನ್ನುವೆ ಎಂಬ ಉತ್ಸಾಹ ಕೂಡ ಜಗದೀಶ್ ಶೆಟ್ಟರ್ ಅವರಲ್ಲಿದೆ. ಹಾಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಗೆಲುವಿನ ಮಾಲೆ ಯಾರಿಗೆ ಎನ್ನುವ ಚರ್ಚೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಲೇ ಇದೆ.
ಎರಡು ಭಾಗವಾದ ಸೆಂಟ್ರಲ್ ಕ್ಷೇತ್ರ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಕ್ಷೇತ್ರ ಎರಡು ಭಾಗವಾದಂತೆ ಕಾಣುತ್ತಿದೆ. ಒಂದು ಭಾಗ ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತ ನಂಬಿದ ಜನರು. ಬಿಜೆಪಿ ಜಗದೀಶ್ ಶೆಟ್ಟರ್‌ಗೆ ಎಷ್ಟು ಅವಕಾಶ ನೀಡಿದೆ. ಶಾಸಕರಾಗಿ, ಸಚಿವರಾಗಿ, ಪ್ರತಿ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ, ಮತ್ತೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಲು ಅವಕಾಶ ನೀಡಿತ್ತು. ಆದರೆ, ಕೇವಲ ಟಿಕೆಟ್ ವಿಚಾರ ಮುಂದಿಟ್ಟುಕೊಂಡು, ರಾಷ್ಟ್ರ ನಾಯಕರು ಮನೆಗೆ ಬಂದರೂ ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿದರಲ್ಲ ಎಂಬುದು ಆ ಗುಂಪಿನ ಬೇಸರಕ್ಕೆ ಕಾರಣವಾಗಿದೆ.
ಮತ್ತೊಂದು ಗುಂಪು ಅವರು ಯಾವುದೇ ಪಕ್ಷದಲ್ಲಿ ಇರಲಿ, ಅವರ ಸರಳತೆ ಸದಾ ಜನರ ಕೈಗೆ ಸಿಗುವ ರೀತಿ, ಮಾಡಿರುವ ಕೆಲಸ ನಂಬಿ ಅವರನ್ನು ಬೆಂಬಲಿಸುವುದು. ಅಲ್ಲದೇ ಶೆಟ್ಟರ್ ಅಂತಹ ಹಿರಿಯ ನಾಯಕರಿಗೆ ಬಿಜೆಪಿ ನಾಯಕರು ಟಿಕೆಟ್ ಕೊಡದೇ ಇಂತಹ ಅನ್ಯಾಯ ಮಾಡಿದರಲ್ಲ ಎಂದು ಅನುಕಂಪ ಹೊಂದಿರುವ ಗುಂಪು. ಆರು ಬಾರಿ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಅವರಿಗೆ ಕ್ಷೇತ್ರದ ಮೇಲೆ ಹಿಡಿತ ಹೆಚ್ಚಿದೆ. ಹಿರಿಯ ರಾಜಕಾರಣಿಗೆ ಅನ್ಯಾಯ ಎನ್ನುವ ಟ್ರಂಪ್ ಕಾರ್ಡ್. ಕಾಂಕ್ರಿಟ್ ರಸ್ತೆ, ಒಳ ಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಯೋಜನಡಗಳು ಅವರನ್ನು ಕೈ ಹಿಡಿಯಬಹುದು. ಆದರೆ, ಪ್ರತಿಸ್ಪರ್ಧಿ, ಶಿಷ್ಯ ಮಹೇಶ್ ಟೆಂಗಿನಕಾಯಿಗೆ ಬಿಜೆಪಿಯ ಹೈಕಮಾಂಡ್ ಕೃಪಾಕಟಾಕ್ಷವಿದೆ. ಅಲ್ಲದೇ ಕಟ್ಟಾ ಬಿಜೆಪಿ ಬಂಬಲಿಗರಿಗೆ ಶೆಟ್ಟರ್ ನಡೆಯಿಂದ ಬೆಸರ ಇವರಿಗೆ ವರದಾನವಾಗಬಹುದು.
ಮತದಾರರು ಹೇಳುವುದು ಇಷ್ಟು: ಬದಲಾದ ರಾಜಕೀಯ ಸನ್ನಿವೇಶಗಳಿಂದ ಕ್ಷೇತ್ರ ಕುತೂಹಲ ಕೆರಳಿಸುತ್ತಿರುವುದು ಸುಳ್ಳಲ್ಲ. ಜಗದೀಶ್ ಶೆಟ್ಟರ್ ಮತ್ತು ಮಹೇಶ್ ಮಹೇಶ್ ಟೆಂಗಿನಕಾಯಿ ನಡುವೆ ನೇರ ಹಣಾಹಣಿ ಇದೆ. ಇಬ್ಬರೂ ಸಮಬಲ ಅಭ್ಯರ್ಥಿಗಳಾಗಿದ್ದರಿಂದ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇದೆ. ಜಗದೀಶ್ ಶೆಟ್ಟರ್ ಈ ಕ್ಷೇತ್ರದಿಂದ ಸತತವಾಗಿ ಆರು ಬಾರಿ ಗೆದ್ದು ಬಂದಿದ್ದಾರೆ. ಕೆಲವು ಅಭಿವೃದ್ಧಿಯಾಗಿವೆ, ಇನ್ನು ಅಭಿವೃದ್ಧಿಯಾಗಬೇಕಿರುವುದು ಸಾಕಷ್ಟಿದೆ. ಈಗಾಗಲೇ ಹಲವು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಶೆಟ್ಟರ್ ಮರು ಆಯ್ಕೆಯಿಂದ ಅವುಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬಹುದು ಎನ್ನುತ್ತಾರೆ ಸ್ಥಳೀಯ ಮತದಾರ ಸಂಜೀವ ದುಮಕನಾಳ.
ನಾವು 25 ವರ್ಷಗಳಿಂದ ಈ ಕ್ಷೇತ್ರವನ್ನು ಗಮನಿಸುತ್ತಾ ಬಂದಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಹಲವರದ್ದು ಹಲವು ರೀತಿಯ ಭಿನ್ನಾಪ್ರಾಯಗಳಿವೆ. ಎಲ್ಲವೂ ಅಭಿವೃದ್ಧಿ ಆಗಿಲ್ಲ ಎಂದು ಹೇಳುವುದಿಲ್ಲ. ದೊಡ್ಡ ದೊಡ್ಡ ಯೋಜನೆಗಳು ಕ್ಷೇತ್ರಕ್ಕೆ ಅನುಕೂಲಕರವಾಗಿರಬಹುದು. ಆದರೆ, ಸಣ್ಣ-ಪುಟ್ಟ ಕೆಲಸಗಳು ಅಷ್ಟು ಪ್ರಮಾಣದಲ್ಲಿ ಆಗಿಲ್ಲ. ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾ ಚಾಲಕರಿದ್ದಾರೆ. 17 ಸಾವಿರ ಆಟೋಗಳು ಓಡಾಡುತ್ತವೇ. ಇದುವರೆಗೂ ಯಾವ ಪಕ್ಷದವರು ನಮ್ಮ ಸಮಸ್ಯೆಗಳ ಬಗ್ಗೆ ಕೇಳಿಲ್ಲ.
ನಮಗೆ ನಮ್ಮನ್ನು ಮುಂದೆ ಕರೆದುಕೊಂಡು ಹೋಗುವ ಜನನಾಯಕ ಬೇಕು. ಕಳೆದ 25 ವರ್ಷದಿಂದ ವ್ಯಕ್ತಿಯನ್ನು ಆರಿಸಿ ತರುವುದೇ ಆಗಿದೆ ಹೊರತು ಆಟೋ ರಿಕ್ಷಾ ಚಾಲಕರಿಗೆ ಹೇಳಿಕೊಳ್ಳುವಂತಹದ್ದನ್ನು ಯಾರೂ ಏನನ್ನು ಮಾಡಿಲ್ಲ. ಗೆದ್ದ ಬಳಿಕ ಎಸಿ ಕಾರುಗಳಲ್ಲಿ ಓಡಾಡುವ ಇವರು ಈವರೆಗೂ ನಮ್ಮ ಸಮಸ್ಯೆ ಕೇಳಿಲ್ಲ ಅನ್ನೋದೇ ನೋವಿನ ಸಂಗತಿ. ಆದರೆ, ವೋಟು ಹಾಕುವುದು ನಮ್ಮ ಕರ್ತವ್ಯ. ಒಳ್ಳೆಯ ವ್ಯಕ್ತಿಯನ್ನು ಆರಿಸಿ ತರುವುದು ನಮ್ಮ ಕೆಲಸ. ಕ್ಷೇತ್ರ ಅಭಿವೃದ್ಧಿ ಮಾಡುವುದು ಜನನಾಯಕರ ಕೆಲಸ. ಸದ್ಯ ಬದಲಾದ ರಾಜಕೀಯ ಸನ್ನಿವೇಶದಿಂದ ಕ್ಷೇತ್ರದ ಮತದಾರರು ಗೊಂದಲದಲ್ಲಿದ್ದಾರೆ. ಒಂದು ಕಡೆ 6 ಬಾರಿ ಗೆದ್ದ ಜಗದೀಶ್ ಶೆಟ್ಟರ್, ಮತ್ತೊಂದೆಡೆ ಮಹೇಶ್ ತೆಂಗಿನಕಾಯಿ. ಇದರಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಸದ್ಯಕ್ಕೆ ಹೇಳಲಾಗದು. ಇದು ಫಲಿತಾಂಶದ ದಿನ ಗೊತ್ತಾಗುತ್ತದೆ ಎನ್ನುತ್ತಾರೆ ಆಟೋ ಚಾಲಕ ಶೇಖರಯ್ಯ ಮಠಪತಿ.
ಮತದಾರರ ವಿವರ: ಕ್ಷೇತ್ರದಲ್ಲಿ ಒಟ್ಟು 2,42,000 ಮತದಾರರಿದ್ದಾರೆ. ಅದರಲ್ಲಿ ಪುರುಷ ಮತದಾರರು 1,21,695, ಮಹಿಳಾ ಮತದಾರರು 1,29,972, ಇತರೆ 33 ಮತದಾರಿದ್ದಾರೆ. ಲಿಂಗಾಯತ ಮತಗಳು ಇಲ್ಲಿ ನಿರ್ಣಾಯಕ. ಮುಸ್ಲಿಂ, ಮರಾಠ, ಕ್ರೈಸ್ತರು, ಎಸ್ಸಿ/ಎಸ್ಟಿ, ಬ್ರಾಹ್ಮಣ ಕೂಡ ಪ್ರಬಲ ಸಮುದಾಯಗಳಾಗಿವೆ.
ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆ: ಮತದಾನ ಮಾಡಿದ ಹಿರಿಯ ನಟಿ ಡಾ. ಎಂ. ಲೀಲಾವತಿ