ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದರೂ ಕೂಡ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಮಹದಾಯಿ, ಮೇಕೆದಾಟು ಬಗ್ಗೆ ಆಡಳಿತಾರೂಢ ಬಿಜೆಪಿಗೆ ಯಾವುದೇ ಕಾಳಜಿ ಇಲ್ಲ. ಸ್ಥಳೀಯ ಚುನಾವಣೆಗಳ ಬಗ್ಗೆ ಅಸಾಂವಿಧಾನಿಕ ನಿಲುವನ್ನು ಸರ್ಕಾರ ಹೊಂದಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತದೆ ವಿನಃ ಯಾವುದೇ ಕೆಲಸ ಮಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ನಾನು ಕೇಂದ್ರ ಸಚಿವನಾಗಿದ್ದ ವೇಳೆ ನೀರಿನ ಸಮಸ್ಯೆ ಒಂದೇ ವಾರದಲ್ಲಿ ಬಗೆಹರಿಸುವ ಕಾರ್ಯ ಮಾಡಿದ್ದೇವೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಹದಾಯಿ ವಿವಾದ ಇತ್ಯರ್ಥಕ್ಕೆ ಮನಸು ಮಾಡುತ್ತಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಕೇವಲ ಬಣ್ಣದ ಮಾತುಗಳಿಂದ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದ ಆರೇಳು ತಿಂಗಳು ಕಳೆದಿದೆ. ಆದರೂ ಮೇಯರ್, ಉಪಮೇಯರ್ ಚುನಾವಣೆ ನಡೆದಿಲ್ಲ. ಅಲ್ಲದೇ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಬಿಜೆಪಿ ಅಸಾಂವಿಧಾನಿಕ ನಿಲುವು ಹೊಂದಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ಕೈ ಬಲಪಡಿಸೋದೆ ನಮ್ಮ ಮುಂದಿನ ಗುರಿ: ಜಿ -23ಗೆ ನಾನೂ ಸಹ ಸಹಿ ಹಾಕಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕೆಂದು ಸಹಿ ಹಾಕಿದ್ದೇವೆ. ನಾಯಕತ್ವ ಪ್ರಶ್ನಿಸೋದು ಸರಿಯಲ್ಲ. ನಾನು ಜಿ-23 ನಿರ್ಧಾರಕ್ಕೆ ವಿರೋಧಿಸಿದ್ದೇನೆ. ನಾನೀಗ ಜಿ - 23 ಜೊತೆಗಿಲ್ಲ. ಆದರೆ, ಸೋನಿಯಾಗಾಂಧಿ ಕೈ ಬಲಪಡಿಸೋದೆ ನಮ್ಮ ಮುಂದಿರುವ ಗುರಿ. ಪಂಚರಾಜ್ಯಗಳ ಸೋಲಿನ ಪರಾಮರ್ಶೆ ನಡೆದಿದೆ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾಯಕರ ಬದಲಾವಣೆ ಅಸಾಧ್ಯ. ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಕೊರತೆಯಿಂದ ಬಿಜೆಪಿ ಪ್ರಬಲವಾಗಿದೆ ಎಂಬ ಮಾತನ್ನು ಒಪ್ಪಲ್ಲ ಎಂದರು.
ಇದನ್ನೂ ಓದಿ: ಜೈನ ಸಮಾಜದ ನಿರೀಕ್ಷೆ ಹುಸಿಗೊಳಿಸಲ್ಲ: ಸಿಎಂ ಬೊಮ್ಮಾಯಿ ಅಭಯ