ಧಾರವಾಡ: ಜುಲೈ 26 ಕ್ಕೆ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರಿಗೆ ಯಾರು ಡೆಡ್‌ಲೈನ್ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಯಡಿಯೂರಪ್ಪ ಹೇಳಿಕೆ ಮಾಧ್ಯಮದಲ್ಲಿ ಮಾತ್ರ ಕೇಳಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರ ಜೊತೆ ಮಾತುಕತೆ ಆಗಿದೆ ಅಂತ ಹೇಳಿದ್ದಾರೆ. ಏನು ಮಾತುಕತೆ ಆಗಿದೆ ಇವರಿಗೆ ಅವರೇನು ಹೇಳಿದ್ದಾರೆ ಯಾವುದೂ ಗೊತ್ತಿಲ್ಲ. ನನ್ನ ಹೆಸರು ಹಾಗೂ ಮತ್ತೊಬ್ಬರ ಹೆಸರು ಕೇಳಿ ಬರುತ್ತಿದೆ. ಇದೆಲ್ಲವೂ ಮಾಧ್ಯಮದಲ್ಲಿ ಬರುತ್ತಿರೋದು. ಈ ಬಗ್ಗೆ ಯಾರೂ ನನ್ನ ಜೊತೆ ಚರ್ಚೆ ಮಾಡಿಲ್ಲ, ಆ ಚರ್ಚೆಯಲ್ಲಿ ಸಹ ನಾನು ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಾರು, ಯಾಕೆ ವಾರಾಣಸಿಗೆ ಹೋಗಿದ್ದಾರೆ ಅವರನ್ನೇ ಕೇಳಿ. ನಾನು ವ್ಯಾಕ್ಸಿನೇಷನ್, ಗರೀಬ್ ಕಲ್ಯಾಣ ಯೋಜನೆ ನೋಡಲು ಬಂದಿದ್ದೇನೆ. ಉಳಿದವರು ಎಲ್ಲಿ ಹೋಗಿದ್ದಾರೆ ನನಗೆ ಗೊತ್ತಿಲ್ಲ. ನೀವು ಸಹ ಕೇಂದ್ರ ನಾಯಕರಲ್ವಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾತನಾಡಿದ ಅವರು, ನೀವು ಹಾಗೆ ಅಂದುಕೊಂಡಿದ್ದಕ್ಕೆ ಧನ್ಯವಾದಗಳು ಎಂದರು.
ಸಿಎಂ ಆಗಲು ಕರೆ ಬಂದರೆ ಏನು ಮಾಡುತ್ತಿರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ಬಂದರೆ ಅನ್ನೋದಕ್ಕೆ ನಾನು ಯಾಕೆ ಉತ್ತರಿಸಲಿ ಉಹಾಪೋಹಗಳಿಗೆ ನಾನು ಉತ್ತರ ಕೊಡಲಾರೆ ಎಂದರು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಏನು ಮಾತನಾಡುವುದಿಲ್ಲ, wait and see: ಸಚಿವ ಜಗದೀಶ್ ಶೆಟ್ಟರ್